DUSU ಫಲಿತಾಂಶ ಪ್ರಕಟನೆ: ರಾಷ್ಟ್ರ ರಾಜಧಾನಿಯಲ್ಲಿ ಮೆರವಣಿಗೆಯನ್ನು ನಿಷೇಧಿಸಿದ ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ | PTI
ಹೊಸದಿಲ್ಲಿ: ಸೆಪ್ಟೆಂಬರ್ 19ರಂದು ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ, ರಾಷ್ಟ್ರ ರಾಜಧಾನಿಯ ಯಾವುದೇ ಭಾಗದಲ್ಲಿ ಗೆಲುವಿನ ಮೆರವಣಿಗೆ ನಡೆಸುವುದಕ್ಕೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳಿಗೆ ಬುಧವಾರ ದಿಲ್ಲಿ ಹೈಕೋರ್ಟ್ ನಿಷೇಧ ಹೇರಿದೆ.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ನ್ಯಾಯಪೀಠ, ನ್ಯಾಯಾಲಯವು ಚುನಾವಣೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಚುನಾವಣೆಗಳೇನಾದರೂ ಸಮಾಧಾನಕರವಾಗಿ ನಡೆಯದಿದ್ದರೆ, ನ್ಯಾಯಾಲಯ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆಯ ಪದಾಧಿಕಾರಿಗಳ ಕೆಲಸಕಾರ್ಯಗಳನ್ನು ನ್ಯಾಯಾಲಯ ತಡೆಹಿಡಿಯಬಹುದಾಗಿದೆ” ಎಂದು ಎಚ್ಚರಿಸಿತು.
“ನಾವು ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ಚುನಾವಣೆಗಳೇನಾದರೂ ಸಮಾಧಾನಕರವಾಗಿ ನಡೆಯದಿದ್ದರೆ, ಸಂಘಟನೆಯ ಪದಾಧಿಕಾರಿಗಳ ಕೆಲಸಕಾರ್ಯಗಳನ್ನು ನ್ಯಾಯಾಲಯ ತಡೆ ಹಿಡಿಯಬಹುದಾಗಿದೆ” ಎಂದು ನ್ಯಾಯಪೀಠ ಹೇಳಿತು.
ಇದೇ ವೇಳೆ, ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆಯ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಾಧ್ಯವಿರುವ ಹಾಗೂ ಅನುಮತಿ ಇರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ದಿಲ್ಲಿ ಪೊಲೀಸರು, ದಿಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು. ಅಲ್ಲದೆ, ಚುನಾವಣೆ ವೇಳೆ ಯಾವುದೇ ಬಗೆಯ ನಿಯಮಗಳ ಉಲ್ಲಂಘನೆಯಾಗದಿರುವುದನ್ನು ಖಾತರಿಗೊಳಿಸಬೇಕು ಎಂದೂ ಸೂಚಿಸಿತು.