2017ರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ Dileep ಖುಲಾಸೆ: ಪ್ರಕರಣದಲ್ಲಿ ನಟನ ಪಾತ್ರವೇನು?
ನಟ ದಿಲೀಪ್ | Photo Credit : X \ Dileep Online
ತಿರುವನಂತಪುರಂ: 2017ರಲ್ಲಿ ತಮ್ಮ ಸಹ ನಟಿಯೊಬ್ಬರ ಮೇಲೆ ನಡೆದಿದ್ದ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಂಟನೆಯ ಆರೋಪಿಯಾಗಿದ್ದ ನಟ ದಿಲೀಪ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಎರ್ನಾಕುಲಂನ ಸೆಷನ್ಸ್ ನ್ಯಾಯಾಲಯವೊಂದರಿಂದ ಖುಲಾಸೆಗೊಳಿಸಿದೆ. ಈ ಪ್ರಕರಣವು ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು.
►ಏನಿದು ಪ್ರಕರಣ?
ಫೆಬ್ರವರಿ 17, 2017ರಂದು ನಟಿಯೊಬ್ಬರು ತ್ರಿಶೂರ್‌ನ ತಮ್ಮ ನಿವಾಸದಿಂದ ಕೊಚ್ಚಿಗೆ ತೆರಳುವಾಗ, ಆರು ಮಂದಿ ದುಷ್ಮರ್ಮಿಗಳು ಅವರನ್ನು ಅಪಹರಿಸಿದ್ದರು. ಆ ನಟಿಯನ್ನು ದುಷ್ಕರ್ಮಿಗಳು ಕೊಚ್ಚಿಯ ಸುತ್ತ ಆಕೆಯ ಕಾರಿನಲ್ಲಿ ಸುತ್ತಾಡಿಸಿದ ಬಳಿಕ, ಆಕೆಯ ಮೇಲೆ ರೌಡಿ ಶೀಟರ್ ಪಲ್ಸರ್ ಸುನಿ ಎಂಬ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಘಟನೆಯ ದೃಶ್ಯಾವಳಿಗಳನ್ನು ಪಲ್ಸರ್ ಸುನಿ ತನ್ನ ಮೊಬೈಲ್‌ನಲ್ಲೂ ಚಿತ್ರೀಕರಿಸಿಕೊಂಡಿದ್ದ. ಇದಾದ ನಂತರ, ಆರೋಪಿಗಳು ಆ ನಟಿಯನ್ನು ಚಿತ್ರ ನಿರ್ದೇಶಕರೊಬ್ಬರ ನಿವಾಸದ ಬಳಿ ಬಿಟ್ಟು ಪರಾರಿಯಾಗಿದ್ದರು. ಆ ಚಿತ್ರ ನಿರ್ದೇಶಕರ ನೆರವಿನಿಂದ ಆ ಸಂತ್ರಸ್ತ ನಟಿ ಪೊಲೀಸರನ್ನು ಸಂಪರ್ಕಿಸಿದ್ದರು. ಅದೇ ದಿನ ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿತ್ತು.
ತನಿಖೆ ಪ್ರಾರಂಭವಾಗುತ್ತಿದ್ದಂತೆಯೇ ಪೊಲೀಸರಿಗೆ ಶರಣಾಗಿದ್ದ ಪಲ್ಸರ್ ಸುನಿ, ತಾನು ಈ ಕೃತ್ಯವನ್ನು ನಟ ದಿಲೀಪ್ ನಿರ್ದೇಶನದ ಮೇರೆಗೆ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ.
►ದಿಲೀಪ್ ಪಾತ್ರವೇನು?
ಸಂತ್ರಸ್ತ ನಟಿಯನ್ನು ಬೆದರಿಸಲು ಹಾಗೂ ಅವಮಾನಕ್ಕೀಡು ಮಾಡುವ ದೊಡ್ಡ ಪಿತೂರಿಯ ಭಾಗವಾಗಿ ಈ ಲೈಂಗಿಕ ದೌರ್ಜನ್ಯವೆಸಗಲಾಗಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ವಿಚಾರಣೆಯ ವೇಳೆ, ಈ ಅಪರಾಧವನ್ನೆಸಗಲು ನಟ-ನಿರ್ಮಾಪಕ ದಿಲೀಪ್, ರೌಡಿ ಶೀಟರ್ ಪಲ್ಸರ್ ಸುನಿಯನ್ನು ಬಾಡಿಗೆಗೆ ಪಡೆದು ನಿಯೋಜಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು.
ದಿಲೀಪ್ ಗೆ ತನ್ನ ಸಹನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ಆ ಸಂತ್ರಸ್ತ ನಟಿ ಬಯಲುಗೊಳಿಸಿದ್ದರಿಂದ ಅವರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ. ಇದಲ್ಲದೆ, ದಿಲೀಪ್ ಗೆ ಪಲ್ಸರ್ ಸುನಿ ಬರೆದಿದ್ದ ಪತ್ರ ಸೋರಿಕೆಯಾಗಿದ್ದರಿಂದಲೂ, ಈ ಪ್ರಕರಣದಲ್ಲಿನ ದಿಲೀಪ್ ಪಾತ್ರದ ಕುರಿತು ತನಿಖೆ ನಡೆಸಲಾಗಿತ್ತು. ಆ ಪತ್ರದಲ್ಲಿ, ನಾನು ನನ್ನ ಅಪರಾಧ ಕೃತ್ಯ ಪೂರೈಸಿರುವುದರಿಂದ, ನನ್ನ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸುವಂತೆ ಪಲ್ಸರ್ ಸುನಿ ಒತ್ತಾಯಿಸಿದ್ದರು ಎನ್ನಲಾಗಿದೆ.
ಇದಾದ ಬಳಿಕ, ದಿಲೀಪ್ ಅನ್ನು ಪ್ರಕರಣದಲ್ಲಿ ಎಂಟನೆ ಆರೋಪಿಯನ್ನಾಗಿ ಸೇರ್ಪಡೆ ಮಾಡಲಾಗಿತ್ತು ಹಾಗೂ ಜುಲೈ 10, 2017ರಂದು ಅವರನ್ನು ಬಂಧಿಸಲಾಗಿತ್ತು. ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ, ಅದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿತ್ತು.
ಸೌಜನ್ಯ: indianexpress.com