ಜಿನೇವಾ ಓಪನ್: 100ನೇ ಎಟಿಪಿ ಪ್ರಶಸ್ತಿ ಗೆಲ್ಲುವತ್ತ ಜೊಕೊವಿಕ್ ದಿಟ್ಟ ಹೆಜ್ಜೆ
ಜೊಕೊವಿಕ್ | PC : olympics.com
ಜಿನೇವಾ: ಕ್ಯಾಮರೂನ್ ನೂರಿ ಅವರನ್ನು ಮಣಿಸಿ ಕ್ಲೇ-ಕೋರ್ಟ್ ಸ್ಪರ್ಧೆಯಲ್ಲಿ ಫೈನಲ್ ಗೆ ತಲುಪಿರುವ ನೊವಾಕ್ ಜೊಕೊವಿಕ್ ಗೆ ತನ್ನ 100ನೇ ಎಟಿಪಿ ಪ್ರಶಸ್ತಿ ಗೆಲ್ಲುವುದಕ್ಕೆ ಇನ್ನೊಂದೇ ಗೆಲುವಿನ ಅಗತ್ಯವಿದೆ.
24 ಬಾರಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಜೊಕೊವಿಕ್ ಫ್ರೆಂಚ್ ಓಪನ್ ಗೆ ತಯಾರಿ ನಡೆಸಲು ಸ್ವಿಟ್ಝರ್‌ಲ್ಯಾಂಡ್ ನಲ್ಲಿ ಆಡುತ್ತಿದ್ದು, ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಕ್ಯಾಮರೂನ್ ಅವರನ್ನು 6-4, 6-7(6/8), 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ನಂತರ ಜೊಕೊವಿಕ್ ತನ್ನ ಮೊದಲ ಟೂರ್ನಿಯನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಜೊಕೊವಿಕ್ ಅವರು ಫೈನಲ್ ಪಂದ್ಯದಲ್ಲಿ ಪೋಲ್ಯಾಂಡ್‌ನ ಹರ್ಬರ್ಟ್ ಹರ್ಕಾಝ್‌ರನ್ನು ಎದುರಿಸಲಿದ್ದಾರೆ.
ಜಿಮ್ಮಿ ಕಾನರ್ಸ್ ಹಾಗೂ ರೋಜರ್ ಫೆಡರರ್ ನಂತರ 100 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಮೂರನೇ ಆಟಗಾರ ಎನಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ.
ಕೋಚ್ ಹಾಗೂ ತನ್ನ ಹಳೆಯ ಎದುರಾಳಿ ಆಂಡಿ ಮರ್ರೆ ಅವರಿಂದ ಬೇರ್ಪಟ್ಟ ನಂತರ 38ರ ಹರೆಯದ ಜೊಕೊವಿಕ್ ಮೊದಲ ಸ್ಪರ್ಧೆಯಲ್ಲಿ ಆಡುತ್ತಿದ್ದಾರೆ. ಜೊಕೊವಿಕ್ ಈ ವರ್ಷ ಕ್ಲೇ ಕೋರ್ಟ್‌ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿದ್ದಾರೆ. ರವಿವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಟೂರ್ನಿಗಿಂತ ಮೊದಲು ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಜೊಕೊವಿಕ್ ಅವರು 4ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ 25ನೇ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಟ್ರೋಫಿ ಜಯಿಸಿ ದಾಖಲೆ ಮುರಿಯುವ ಉದ್ದೇಶ ಹೊಂದಿದ್ದಾರೆ. ಫ್ರೆಂಚ್ ಓಪನ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಮಕೆಂಝಿ ಮೆಕ್‌ಡೊನಾಲ್ಡ್ ಅವರನ್ನು ಎದುರಿಸಲಿದ್ದಾರೆ.