"ಹಂದಿಯೊಂದಿಗೆ ಕುಸ್ತಿಯಾಡಬಾರದು": ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ
ಮಹುವಾ ಮೊಯಿತ್ರಾ / ಕಲ್ಯಾಣ್ ಬ್ಯಾನರ್ಜಿ (PTI)
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಇಬ್ಬರು ಸಂಸದರ ನಡುವಿನ ಭಿನ್ನಮತ ಸಾರ್ವಜನಿಕವಾಗಿ ಸ್ಫೋಟಗೊಂಡಿದ್ದು, ಹಿರಿಯ ನಾಯಕರು ಮಾಧ್ಯಮಗಳಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಸಂಸದೆ ಮಹುವಾ ಮೊಯಿತ್ರಾ ಮತ್ತು ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ನಡುವೆ ತೀವ್ರ ವಾಗ್ವಾದ ನಡೆಯುತ್ತಿದೆ.
INDIA TODAY ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ಮಹುವಾ ಮೊಯಿತ್ರಾ, “ನೀವು ಹಂದಿಯೊಂದಿಗೆ ಕುಸ್ತಿಯಾಡಬಾರದು. ಹಂದಿಗೆ ಅದು ಇಷ್ಟವಾಗುತ್ತದೆ. ಆದರೆ ನೀವು ಕೊಳಕಾಗುತ್ತೀರಿ” ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಯವರ ಮೇಲೆ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಇತ್ತೀಚೆಗೆ ಕಲ್ಯಾಣ್ ಬ್ಯಾನರ್ಜಿಯವರು ಮಹುವಾ ಮೊಯಿತ್ರಾರ ವೈಯಕ್ತಿಕ ಜೀವನದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಬಿಜೆಡಿಯ ಮಾಜಿ ಸಂಸದ ಮತ್ತು ಹಿರಿಯ ವಕೀಲ ಪಿನಾಕಿ ಮಿಶ್ರಾ ಅವರೊಂದಿಗಿನ ಮಹುವಾ ವಿವಾಹದ ಕುರಿತು ಕಲ್ಯಾಣ್ ಬ್ಯಾನರ್ಜಿ ಹೇಳಿಕೆ ನೀಡಿದ್ದರು.
ಜೂನ್‌ನಲ್ಲಿ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ವಿದ್ಯಾರ್ಥಿ ಘಟಕದ ಇಬ್ಬರು ಸದಸ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾದ ನಂತರ, ಇಬ್ಬರು ಸಂಸದರ ನಡುವೆ ವಾಗ್ವಾದ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ಬ್ಯಾನರ್ಜಿಯವರು ನೀಡಿದ್ದ ಹೇಳಿದೆ ಮಹುವಾ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದರು, “ಸ್ನೇಹಿತರೇ ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿದರೆ ಏನು ಮಾಡಬಹುದು?” ಎಂದು ಕಲ್ಯಾಣ್ ಬ್ಯಾನರ್ಜಿ ನೀಡಿದ್ದ ಹೇಳಿಕೆಯನ್ನು ಮಹೂವಾ ಮೊಯಿತ್ರಾ ತೀವ್ರವಾಗಿ ಟೀಕಿಸಿದ್ದರು. ಈ ಹೇಳಿಕೆಯನ್ನು ಟಿಎಂಸಿ ಪಕ್ಷವೂ ಸಂವೇದನಾಶೀಲವಲ್ಲದ ಹೇಳಿಕೆ ಎಂದು ಖಂಡಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಲ್ಯಾಣ್ ಬ್ಯಾನರ್ಜಿಯವರು, ಮಹುವಾ ಮೋಹಿತ್ರ ಅವರ ವೈಯುಕ್ತಿಕ ಜೀವನದ ಬಗ್ಗೆ ಕಿಡಿಕಾರಿದ್ದರು.
ಬ್ಯಾನರ್ಜಿಯವರು ಪ್ರತೀಕಾರವಾಗಿ ಮೊಯಿತ್ರಾರ ವೈಯಕ್ತಿಕ ಬದುಕಿನ ಮೇಲೆ ಕಿಡಿಕಾರಿದರು. “ ಮೊಯಿತ್ರಾ ನನ್ನನ್ನು ಸ್ತ್ರೀ ದ್ವೇಷಿ ಎಂದು ಹೇಳುತ್ತಾರೆ. ಅವರು 40 ವರ್ಷಗಳ ಕುಟುಂಬವನ್ನು ಮುರಿದು 65 ವರ್ಷದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ದೇಶದ ಮಹಿಳೆಯರೇ ನಿರ್ಧರಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು.
ಪಾಡ್ ಕ್ಯಾಸ್ಟ್ ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, “ಭಾರತದಲ್ಲಿ ತೀವ್ರ ಸ್ತ್ರೀದ್ವೇಷಿಗಳು, ಲೈಂಗಿಕವಾಗಿ ನಿರಾಶೆಗೊಂಡವರು, ಭ್ರಷ್ಟ ಪುರುಷರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರು ಸಂಸತ್ತಿನಲ್ಲಿ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಮೌನವನ್ನೂ ಅವರು ದುರದೃಷ್ಟಕರ ಎಂದರು. ಪಕ್ಷದ ನಾಯಕತ್ವವು ಸೂಕ್ತ ಸಮಯದಲ್ಲಿ ಮಾತನಾಡುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.