×
Ad

ಉತ್ತರ ಪ್ರದೇಶ | ಪೊಲೀಸರ ಶೋಧದ ವೇಳೆ ಹಾಸಿಗೆಯಡಿ ಅವಿತುಕೊಂಡಿದ್ದ ಎಸ್‌ಪಿ ನಾಯಕ : ವೀಡಿಯೊ ವೈರಲ್

Update: 2025-09-06 12:33 IST

Photo credit: indiatoday.in

ಹೊಸದಿಲ್ಲಿ : ಗಡೀಪಾರು ಆದೇಶವನ್ನು ಉಲ್ಲಂಘಿಸಿದ ಸಮಾಜವಾದಿ ಪಕ್ಷದ ನಾಯಕ ಕೈಶ್ ಖಾನ್ ಅವರನ್ನು ಉತ್ತರ ಪ್ರದೇಶದ ಕನೌಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೈಶ್ ಖಾನ್ ಗಾಗಿ ಮೊದಲು ಉತ್ತರಪ್ರದೇಶದ ಪೊಲೀಸರು ಅವರ ಮನೆಯನ್ನು ಸಂಪೂರ್ಣವಾಗಿ ಶೋಧಿಸಿದ್ದರು. ಆದರೆ, ಅವರು ಪತ್ತೆಯಾಗಿರಲಿಲ್ಲ. ನಂತರ ಸಹೋದರನ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಕೈಶ್ ಖಾನ್ ಹಾಸಿಗೆಯಡಿಯಲ್ಲಿ ಅವಿತುಕೊಂಡಿರುವುದು ಕಂಡು ಬಂದಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರಾಗಿದ್ದ ಕೈಶ್ ಖಾನ್ ಅವರನ್ನು ಕನೌಜ್ ಜಿಲ್ಲೆಯಿಂದ ಆರು ತಿಂಗಳ ಕಾಲ ಗಡೀಪಾರು ಮಾಡಿ ಕನೌಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಮೋಹನ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಆದೇಶಿಸಿದ್ದರು. ನ್ಯಾಯಾಲಯ ತಕ್ಷಣ ಜಿಲ್ಲೆಯನ್ನು ತೊರೆಯುವಂತೆ ಅವರಿಗೆ ಸೂಚಿಸಿತ್ತು.

ಗಡೀಪಾರಿನ ನಂತರ ಕೈಶ್ ಖಾನ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಬುಧವಾರ ಆತ ಬಾಲಪೀರ್‌ನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನ ನಿವಾಸ ಮತ್ತು ಸಹೋದರನ ಮನೆಯಲ್ಲಿ ಶೋಧ ನಡೆಸಿದರೂ ಆರಂಭದಲ್ಲಿ ಆತ ಸಿಕ್ಕಿರಲಿಲ್ಲ. ಹೆಚ್ಚಿನ ಶೋಧ ನಡೆಸಿದಾಗ ಸಹೋದರನ ಮನೆಯ ಕೊಠಡಿಯೊಂದರಲ್ಲಿ ಹಾಸಿಗೆಯಡಿಯಲ್ಲಿ ಅವಿತುಕೊಂಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಕೈಶ್ ಖಾನ್ ಅವರನ್ನು ವಶಕ್ಕೆ ಪಡೆದಿರುವುದನ್ನು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ದೃಢಪಡಿಸಿದ್ದಾರೆ. ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಗೂಂಡಾ ಕಾಯ್ದೆಯ ಸೆಕ್ಷನ್ 3 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News