×
Ad

ಶುಚಿ ಇಲ್ಲದ ಟಾಯ್ಲೆಟ್ ಫೋಟೋ ತೆಗೆಯಿರಿ, ಸಾವಿರ ರೂ. ಫಾಸ್ಟ್‌ಟ್ಯಾಗ್ ಅಕೌಂಟ್ ಗೆ ಪಡೆಯಿರಿ!

NHAI ನಿಂದ 'ಕ್ಲೀನ್ ಟಾಯ್ಲೆಟ್ ಪಿಚ್ಚರ್ ಚಾಲೆಂಜ್'

Update: 2025-10-17 15:49 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಹೆದ್ದಾರಿಗಳಲ್ಲಿ ನೈರ್ಮಲ್ಯ ಮತ್ತು ಶೌಚಾಲಯ ಸ್ವಚ್ಛತೆಯನ್ನು ಉತ್ತೇಜಿಸಲು ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. ‘ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್’ ಎಂಬ ಹೆಸರಿನ ಈ ಯೋಜನೆಯಡಿ, ಟೋಲ್ ಪ್ಲಾಝಾಗಳಲ್ಲಿನ ಅಥವಾ ಹೆದ್ದಾರಿಯಲ್ಲಿನ NHAI ನಿರ್ವಹಣೆಯ ಅಶುದ್ಧ ಶೌಚಾಲಯಗಳ ಚಿತ್ರಗಳನ್ನು ‘ರಾಜಮಾರ್ಗಯಾತ್ರೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡುವ ಪ್ರಯಾಣಿಕರಿಗೆ 1,000 ರೂ. ಮೌಲ್ಯದ ಫಾಸ್ಟ್‌ಟ್ಯಾಗ್ ರೀಚಾರ್ಜ್ ಬಹುಮಾನ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಈ ಕ್ರಮವು NHAI ನ “ವಿಶೇಷ ಅಭಿಯಾನ 5.0” ಸ್ವಚ್ಛತಾ ಯೋಜನೆಯ ಭಾಗವಾಗಿದ್ದು, ಅಕ್ಟೋಬರ್ 31ರವರೆಗೆ ಈ ಅಭಿಯಾನ ಜಾರಿಯಲ್ಲಿರಲಿದೆ.

ಈ ಅಭಿಯಾನದಲ್ಲಿ ಭಾಗವಹಿಸಲು ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ‘ರಾಜಮಾರ್ಗಯಾತ್ರೆ’ ಅಪ್ಲಿಕೇಶನ್‌ ನ ಇತ್ತೀಚಿನ ಆವೃತ್ತಿ ಇನ್‌ಸ್ಟಾಲ್ ಮಾಡಿರಬೇಕು. ಹೆದ್ದಾರಿಯಲ್ಲಿರುವ NHAI ನಿರ್ವಹಣೆಯ ಅಶುದ್ಧ ಶೌಚಾಲಯದ ಸ್ಪಷ್ಟ ಚಿತ್ರ ತೆಗೆದು ಅದನ್ನು ಅಪ್ಲಿಕೇಶನ್‌ ನಲ್ಲಿ ಅಪ್‌ಲೋಡ್ ಮಾಡಬೇಕು. ಚಿತ್ರವನ್ನು ಸಲ್ಲಿಸುವಾಗ ಬಳಕೆದಾರ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ (VRN) ಹಾಗೂ ಮೊಬೈಲ್ ಸಂಖ್ಯೆ ನೀಡಬೇಕು. ಪ್ರತಿ ನೈಜ ವರದಿಗೆ ರೂ.1,000 ಮೌಲ್ಯದ ಫಾಸ್ಟ್‌ಟ್ಯಾಗ್ ರೀಚಾರ್ಜ್ ಬಹುಮಾನವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಬಹುಮಾನವನ್ನು ನಗದು ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ. ಅದು ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಆಗಿರುವ ಫಾಸ್ಟ್‌ಟ್ಯಾಗ್ ಖಾತೆಗೆ ಮಾತ್ರ ಜಮಾ ಆಗುತ್ತದೆ. ಯೋಜನೆಗೆ ಕೇವಲ NHAI ನಿರ್ಮಿಸಿರುವ ಅಥವಾ ನಿರ್ವಹಿಸುವ ಶೌಚಾಲಯಗಳು ಮಾತ್ರ ಈ ಯೋಜನೆಯಡಿ ಫೋಟೋ ಅಪ್‌ಲೋಡ್ ಮಾಡಲು ಅರ್ಹವಾಗುತ್ತವೆ. ಇಂಧನ ಕೇಂದ್ರಗಳು, ಧಾಬಾಗಳು, ರೆಸ್ಟೋರೆಂಟ್‌ಗಳು ಅಥವಾ ಖಾಸಗಿ ಶೌಚಾಲಯಗಳು ಈ ಯೋಜನೆಗೆ ಒಳಪಡುವುದಿಲ್ಲ.

ಪ್ರತಿ ಶೌಚಾಲಯವನ್ನು ದಿನಕ್ಕೆ ಒಮ್ಮೆ ಮಾತ್ರ ಪರಿಗಣಿಸಲಾಗುತ್ತದೆ. ಒಂದೇ ಶೌಚಾಲಯದ ಚಿತ್ರವನ್ನು ಅನೇಕರು ಕಳುಹಿಸಿದರೆ, ಮೊದಲು ವರದಿ ಮಾಡಿದವರಿಗೆ ಮಾತ್ರ ಬಹುಮಾನ ನೀಡಲಾಗುತ್ತದೆ. ಪ್ರತಿಯೊಂದು ವರದಿಗೂ ಜಿಯೋ-ಟ್ಯಾಗ್ ಮತ್ತು ಸಮಯದ ಸೀಲ್ ಅಗತ್ಯ. ನಕಲಿ ಅಥವಾ ಮರುಬಳಕೆ ಮಾಡಿದ ಚಿತ್ರಗಳನ್ನು ತಿರಸ್ಕರಿಸಲಾಗುತ್ತದೆ. ವರದಿಗಳ ಪರಿಶೀಲನೆಗಾಗಿ AI ಸಹಾಯಿತ ಹಾಗೂ ಸಾಮಾನ್ಯ ಪರಿಶೀಲನಾ ವ್ಯವಸ್ಥೆ ಬಳಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News