×
Ad

"ಈಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ": ಕಾನೂನು ಸಲಹೆ ನೀಡಿದ ವಕೀಲರಿಗೆ ಸಮನ್ಸ್ ನೀಡಿದ್ದಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

Update: 2025-07-21 15:56 IST

Photo credit: PTI

ಹೊಸದಿಲ್ಲಿ: ವಕೀಲರಿಗೆ ಕಾನೂನು ಸಲಹೆ ನೀಡಿದ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್‌ ನೀಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದು “ಎಲ್ಲಾ ಮಿತಿಗಳನ್ನು ದಾಟಿದ” ಕ್ರಮವಾಗಿದೆ ಎಂದು ಕಿಡಿಕಾರಿದೆ.

ಇಂತಹ ಕ್ರಮಗಳು ಕಾನೂನು ವೃತ್ತಿಯ ಸ್ವಾತಂತ್ರ್ಯವನ್ನು ಹಾಳುಮಾಡುವ ಅಪಾಯವಿದೆ ಎಂದು ಸೂಚಿಸಿರುವ ನ್ಯಾಯಾಲಯ, ಈಡಿಗೆ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಸ್ವಯಂಪ್ರೇರಿತವಾಗಿ ಈ ವಿಚಾರಣೆಯನ್ನು ಆರಂಭಿಸಿದೆ. ಹಿರಿಯ ವಕೀಲರು ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಈಡಿಯಿಂದ ಸಮನ್ಸ್‌ ನೀಡಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

"ವಕೀಲರ ಮತ್ತು ಕಕ್ಷಿದಾರರ ನಡುವೆ ಸಂಭಾಷಣೆಯು ಗೌಪ್ಯವಾಗಿರಬೇಕು. ಇಂತಹ ಗೌಪ್ಯ ಸಂವಾದಗಳಿಗಾಗಿ ಸಮನ್ಸ್ ನೀಡುವುದು ನ್ಯಾಯಯುತವಲ್ಲ," ಎಂದು ಸಿಜೆಐ ಹೇಳಿದ್ದಾರೆ.

" ಈ ಕ್ರಮಗಳು ಪ್ರತಿಕೂಲ ಪರಿಣಾಮ ಬೀರಲಿದೆ. ಇದು ಭವಿಷ್ಯದಲ್ಲಿ ವಕೀಲರು ಪ್ರಾಮಾಣಿಕ ಸಲಹೆ ನೀಡಲು ಹಿಂದೇಟು ಹಾಕುಲಿದೆ," ಎಂದು ಅವರು ಎಚ್ಚರಿಸಿದರು.

ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈಡಿಗೆ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ವಿಚಾರಿಸಲು ಸೂಚನೆ ನೀಡಿದ್ದು, ಕಾನೂನು ಸಲಹೆಗಾಗಿ ಸಮನ್ಸ್‌ ನೀಡಬಾರದು ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

"ಕಾನೂನು ಅಭಿಪ್ರಾಯ ನೀಡಿದರೆ ಸಮನ್ಸ್ ಹಾಕುವುದು ಸರಿಯಲ್ಲ. ಇದನ್ನು ರಾಜಕೀಯವಾಗಿ ಬಳಸದಿರಿ," ಎಂದು ಸಿಜೆಐ ಹೇಳಿದರು.

ಈ ನಡುವೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಮತ್ತು ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಈಡಿಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, "ಕಾನೂನು ವೃತ್ತಿಯ ಅಡಿಪಾಯವನ್ನೇ ಬುಡಮೇಲು ಮಾಡುವ ಅಪಾಯಕಾರಿ ಪ್ರವೃತ್ತಿ" ಎಂದು ವ್ಯಾಖ್ಯಾನಿಸಿದೆ.

ಈ ವಿಷಯದ ಬಗ್ಗೆ ಪೀಠವು ಎಲ್ಲಾ ಸಂಬಂಧಿತ ಬಾರ್ ಸಂಸ್ಥೆಗಳಿಗೆ ತಮ್ಮ ಅಭಿಪ್ರಾಯವನ್ನು ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಲಾಗಿದೆ.

"ನಾವು ಎಲ್ಲರೂ ವಕೀಲರೇ... ಕಾನೂನು ಪ್ರಕ್ರಿಯೆಯ ಗೌರವ ಉಳಿಸೋಣ," ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News