×
Ad

ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಮುದ್ರಣ ದೋಷಗಳನ್ನು ಸರಿಪಡಿಸಬೇಕು: ಸುಪ್ರೀಂ ಕೋರ್ಟ್

Update: 2025-10-16 20:49 IST

ಸುಪ್ರೀಂ ಕೋರ್ಟ್ | Photo Credit : sci.gov.in

 

ಹೊಸದಿಲ್ಲಿ, ಅ. 16: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಬಳಿಕ ಸಿದ್ಧಪಡಿಸಲಾಗಿರುವ ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮುದ್ರಣ ಮತ್ತು ಇತರ ದೋಷಗಳ ಬಗ್ಗೆ ಚುನಾವಣಾ ಆಯೋಗವು ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ಗಮನ ಹರಿಸುತ್ತದೆ ಎಂದು ತಾನು ನಿರೀಕ್ಷಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆಗೆ ಸಂಬಂಧಿಸಿದ ಕಾನೂನು ವಿಷಯಗಳ ಬಗ್ಗೆ ನವೆಂಬರ್ 4ರಂದು ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಯಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.

ತಾನು ಅಂತಿಮ ಮತದಾರ ಪಟ್ಟಿಯನ್ನು ಸೆಪ್ಟಂಬರ್ 30ರಂದು ಪ್ರಕಟಿಸಿದ ಬಳಿಕ, ಹೆಸರು ತೆಗೆದುಹಾಕಲಾಗಿರುವ ಬಗ್ಗೆ ಯಾವುದೇ ಮತದಾರ ಅರ್ಜಿ ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿತು.

ಅಂತಿಮ ಪಟ್ಟಿಗೆ ತನ್ನ ಹೆಸರನ್ನು ಸೇರಿಸಲಾಗಿಲ್ಲ ಎಂಬುದಾಗಿ ಆರೋಪಿಸಿರುವ ಮತದಾರನ ವಿವರಗಳು ಸರಿಯಾಗಿವೆ ಎಂದು ಅರ್ಜಿದಾರ ಸರಕಾರೇತರ ಸಂಸ್ಥೆ ‘ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ನ ವಕೀಲ ಪ್ರಶಾಂತ್ ಭೂಷಣ್ ಹೇಳಿದರು. ಅಕ್ಟೋಬರ್ 7ರಂದು ನಡೆದ ವಿಚಾರಣೆಯ ವೇಳೆ, ಈ ಮತದಾರನ ವಿವರಗಳು ನಕಲಿ ಎಂಬುದಾಗಿ ಚುನಾವಣಾ ಆಯೋಗ ಆರೋಪಿಸಿತ್ತು.

ಎಸ್‌ಐಆರ್ ವೇಳೆ ಎಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾವ ಕಾರಣಕ್ಕಾಗಿ ಎನ್ನುವುದನ್ನು ಚುನಾವಣಾ ಆಯೋಗ ಬಹಿರಂಗಪಡಿಸಬೇಕು ಎಂದು ಪ್ರಶಾಂತ್ ಕುಮಾರ್ ಹೇಳಿದರು. ಈ ಕಸರತ್ತಿನಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಇದು ಅಗತ್ಯ ಎಂದು ಅವರು ವಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News