ಚುನಾವಣಾ ಬಾಂಡ್ | ಬಿಜೆಪಿ ನಾಯಕ ನಳಿನ್ ಕುಮಾರ್ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ನಳಿನ್ ಕುಮಾರ್ ಕಟೀಲ್
ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಯಡಿ ಈ ಹಿಂದೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಸುಲಿಗೆ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ಡಿಸೆಂಬರ್ 3, 2024ರಂದು ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸೋಮವಾರ ಸುಪ್ರೀಂ ಕೋರ್ಟ್ ನಿರಾಕರಿಸಿತು.
‘ಜನಾಧಿಕಾರ ಸಂಘರ್ಷ ಪರಿಷತ್’ನ ಆದರ್ಶ್ ಆರ್. ಅಯ್ಯರ್ ಸಲ್ಲಿಸಿದ್ದ ಹಾಗೂ ವಕೀಲ ಪ್ರಶಾಂತ್ ಭೂಷಣ್ ಪ್ರತಿನಿಧಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜಯ್ ಖನ್ನಾ ಹಾಗೂ ನ್ಯಾ. ಸಂಜಯ್ ಕುಮಾರ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು ವಜಾಗೊಳಿಸಿತು.
“ಸೂಕ್ತ ಸಾಕ್ಷ್ಯಾಧಾರವಿಲ್ಲದೆ ನಾವು ತಿರುಗಾಟದ ತನಿಖೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶದ ಮಧ್ಯೆ ನಾವು ಪ್ರವೇಶಿಸಲು ಬಯಸುವುದಿಲ್ಲ” ಎಂದು ನ್ಯಾಯಪೀಠ ಹೇಳಿತು.
ಅದಕ್ಕೆ ಪ್ರತಿಯಾಗಿ, ಈ ರೀತಿಯಲ್ಲಿ ಕ್ರಿಮಿನಲ್ ಪ್ರಕರಣವೊಂದನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆದರೆ, ಹಾಲಿ ಅರ್ಜಿಯ ವಜಾವು ಇತರ ಪ್ರಕರಣಗಳಂತಲ್ಲ ಅಥವಾ ಭವಿಷ್ಯದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಎಫ್ಐಆರ್ ಅನ್ನು ದಾಖಲಿಸಕೂಡದು ಎಂದು ನ್ಯಾಯಾಲಯ ಆದೇಶಿಸಿತು.