25ರ ಕೆಳಗಿನ ಶೇ.90ರಷ್ಟು ಉದ್ಯೋಗಿಗಳು ಆತಂಕದ ಲಕ್ಷಣಗಳಿಂದ ಬಳಲುತ್ತಿದ್ದಾರೆ: ವರದಿ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕುರಿತು ‘ಸ್ಟೇಟ್ ಆಫ್ ಎಮೋಷನಲ್ ವೆಲ್-ಬಿಯಿಂಗ್ ರಿಪೋರ್ಟ್ 2024’ ಶೀರ್ಷಿಕೆಯ ರಾಷ್ಟ್ರಮಟ್ಟದ ವರದಿಯೊಂದು 45 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಶೇ.67ರಷ್ಟು ಜನರಿಗೆ ಹೋಲಿಸಿದರೆ 25 ವರ್ಷಕ್ಕಿಂತ ಕೆಳಗಿನ ಶೇ.90ಕ್ಕೂ ಅಧಿಕ ಕಾರ್ಪೊರೇಟ್ ಉದ್ಯೋಗಿಗಳು ಆತಂಕದ ಲಕ್ಷಣಗಳನ್ನು ತೋರಿಸಿದ್ದಾರೆ ಎಂದು ಹೇಳಿದೆ.
ಉದ್ಯೋಗಿಗಳಿಗೆ ನೆರವು ಕಾರ್ಯಕ್ರಮಗಳನ್ನು ಒದಗಿಸುವ 1to1help ಸಂಕಲಿಸಿರುವ ವರದಿಯು 2024ರ ಜನವರಿ ಮತ್ತು ನವಂಬರ್ ನಡುವೆ ನಡೆಸಲಾದ 83,000ಕ್ಕೂ ಅಧಿಕ ಕೌನ್ಸೆಲಿಂಗ್ ಅವಧಿಗಳು,12,000 ಸ್ಕ್ರೀನಿಂಗ್‌ಗಳು ಮತ್ತು 42,000 ಮೌಲ್ಯಮಾಪನಗಳಿಂದ ದತ್ತಾಂಶಗಳನ್ನು ವಿಶ್ಲೇಷಿಸಿದೆ. ಯುವ ಉದ್ಯೋಗಿಗಳು ಎದುರಿಸುತ್ತಿರುವ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳು ಮತ್ತು ರಚನಾತ್ಮಕ ಸಾಂಸ್ಥಿಕ ಬೆಂಬಲಕ್ಕೆ ಅದು ಒತ್ತು ನೀಡಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಕೌನ್ಸೆಲಿಂಗ್ ಸೇವೆಗಳ ಬಳಕೆಯಲ್ಲಿ ಹೆಚ್ಚಳವನ್ನು ವರದಿಯು ದಾಖಲಿಸಿದ್ದು, ಆತಂಕ, ಖಿನ್ನತೆ ಮತ್ತು ಒತ್ತಡಗಳಂತಹ ಮಾನಸಿಕ ಆರೋಗ್ಯ ಕಳವಳಗಳು ಒಟ್ಟು ಅವಧಿಗಳಲ್ಲಿ ಶೇ.15ರಷ್ಟು ಪಾಲನ್ನು ಹೊಂದಿದ್ದವು. ಕಾರ್ಯಸ್ಥಳ ಸಂಬಂಧಿತ ವಿಷಯಗಳನ್ನು ಹೆಚ್ಚಾಗಿ ಚರ್ಚಿಸಲಾಗಿದ್ದು,ಶೇ.23ರಷ್ಟು ಪಾಲನ್ನು ಹೊಂದಿದ್ದರೆ ಉದ್ಯೋಗ ಸಂಬಂಧಿತ ಕಳವಳಗಳು ಶೇ.11ರಷ್ಟು ಪಾಲನ್ನು ಹೊಂದಿದ್ದವು.
30ಕ್ಕಿಂತ ಕಡಿಮೆ ವಯೋಮಾನದವರಲ್ಲಿ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಗಮನಾರ್ಹವಾಗಿ ತೀವ್ರವಾಗಿದ್ದವು. ವರದಿಯ ಪ್ರಕಾರ,ಪ್ರೌಢಾವಸ್ಥೆಯ ಆರಂಭದ ವರ್ಷಗಳಲ್ಲಿ ಸ್ಥಳಾಂತರ,ವೃತ್ತಿ ಪರಿವರ್ತನೆಗಳು ಮತ್ತು ಸಂಬಂಧಗಳ ತೊಂದರೆಗಳಂತಹ ಒತ್ತಡಗಳು ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ. ಸಂಸ್ಥೆಗಳು ಮುಕ್ತ ಸಂವಹನವನ್ನು ಉತ್ತೇಜಿಸುವ,ಹೊಂದಿಕೊಳ್ಳುವ ಕೆಲಸದ ವಾತಾವರಣವನ್ನು ಒದಗಿಸುವ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯುವ ಉದ್ಯೋಗಿಗಳನ್ನು ಬೆಂಬಲಿಸಬಹುದು ಎಂದು ವರದಿಯು ಸೂಚಿಸಿದೆ.
ನಿರ್ದಿಷ್ಟ ಕಳವಳವಾಗಿ ವರದಿಯು ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೆಚ್ಚುತ್ತಿರುವುದನ್ನು ಗಮನಿಸಿದೆ. 2023ರಲ್ಲಿ ಶೇ.19ರಷ್ಟಿದ್ದ ಆತ್ಮಹತ್ಯೆ ಪ್ರಕರಣಗಳು 2024ಕ್ಕೆ ಶೆ.22ಕ್ಕೆ ಏರಿಕೆಯಾಗಿದ್ದವು. ಇದೇ ಅವಧಿಯಲ್ಲಿ ಹತಾಶೆಯ ಪ್ರಕರಣಗಳು ಶೇ.12ರಿಂದ ಶೇ.17ಕ್ಕೆ ಹೆಚ್ಚಾಗಿದ್ದವು. ಶೇ.59ರಂತಹ ಉದ್ಯೋಗಿಗಳು ಸ್ವಯಂ-ಹಾನಿಯ ಲಕ್ಷಣಗಳನ್ನು ತೋರಿಸಿದ್ದು,ಇದು ಬೇಗುದಿಯನ್ನು ಅನುಭವಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಲು ಮತ್ತು ಅವರಿಗೆ ನೆರವಾಗಲು ಕಚೇರಿ ವ್ಯವಸ್ಥಾಪಕರಿಗೆ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದೆ.
ರಚನಾತ್ಮಕ ಸಮಾಲೋಚನೆಯು ಭಾವನಾತ್ಮಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಯೋಗಕ್ಷೇಮವನ್ನು ಸುಧಾರಿಸುತ್ತದೆ ಎನ್ನುವುದನ್ನು ವಿಶ್ಲೇಷಣೆಗಳು ತೋರಿಸಿವೆ ಎಂದು ಹೇಳಿರುವ ವರದಿಯು,ಕೆಲಸದ ಸ್ಥಳಗಳಲ್ಲಿ ಮಾನಸಿಕ ಸುರಕ್ಷತೆಯ ವಾತಾವರಣವನ್ನು ಹೆಚ್ಚಿಸುವ, ತೊಂದರೆಯಲ್ಲಿರುವ ಉದ್ಯೋಗಿಗಳನ್ನು ಗುರುತಿಸಲು ಮತ್ತು ನೆರವಾಗಲು ಮ್ಯಾನೇಜರ್‌ಗಳಿಗೆ ತರಬೇತಿ ನೀಡುವ ಹಾಗೂ
ಉದ್ಯೋಗಿಗಳ ಅವಲಂಬಿತರಿಗೆ ಮಾನಸಿಕ ಆರೋಗ್ಯ ಬೆಂಬಲವನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದೆ.