ನೈತಿಕತೆ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ; ವಿಮಾನ ಪತನ ಸ್ಥಳದಲ್ಲಿ ಹೇಗೆ ಚಿತ್ರ ತೆಗೆಯಬಾರದು?
PC : PTI
ಹೊಸದಿಲ್ಲಿ: ಫೋಟೊಜರ್ನಲಿಸಮ್ ಅಥವಾ ಛಾಯಾಚಿತ್ರ ಪತ್ರಿಕೋದ್ಯಮವು ಕೆಲವೊಮ್ಮೆ ಒರಟಾಗಿರಬಹುದು. ಅದಕ್ಕೆ ವಾಸ್ತವವನ್ನು ಸಾಧ್ಯವಾದಷ್ಟು ನಿಷ್ಠೆಯಿಂದ ಬಿಂಬಿಸುತ್ತ ಛಾಯಾಗ್ರಾಹಕನ ಕಣ್ಣಿನ ಮೂಲಕ ಘಟನೆಯನ್ನು ದಾಖಲಿಸುವುದು ಅಗತ್ಯವಾಗಿದೆ. ಘಟನೆಯ ಒಂದು ಕ್ಷಣವನ್ನು ಕಳೆದುಕೊಂಡರೂ ಅದು ಇತಿಹಾಸದ ಒಂದು ತುಣುಕನ್ನು ಕಳೆದುಕೊಂಡಂತೆ. ಇದನ್ನೇ ಹೆನ್ರಿ ಕಾರ್ಟಿಯರ್-ಬ್ರೆಸನ್ ‘ನಿರ್ಣಾಯಕ ಕ್ಷಣ’ ಎಂದು ಕರೆದಿದ್ದರು.
ಕ್ಯಾಮೆರಾದ ಆವಿಷ್ಕಾರದ ಬಳಿಕ ಸುದ್ದಿ ವರದಿ, ವಿಶೇಷವಾಗಿ ದುರಂತಗಳು, ವಿಪತ್ತುಗಳು ಮತ್ತು ಇವುಗಳಿಗೆ ಸರಕಾರದ ಮುಖ್ಯಸ್ಥರು ಪ್ರತಿಕ್ರಿಯಿಸುವ ರೀತಿ, ಇವೆಲ್ಲ ಫೋಟೋಜರ್ನಲಿಸಂ ಜೊತೆ ಆಳವಾದ ಸಂಬಂಧವನ್ನು ಹೊಂದಿವೆ. ಚಿತ್ರಗಳು ಕೇವಲ ಘಟನೆಗಳ ದೃಶ್ಯವನ್ನು ಬಿಂಬಿಸುವುದಿಲ್ಲ, ಚಿತ್ರಗಳು ಅವುಗಳ ಗಂಭೀರತೆ ಮತ್ತು ಐತಿಹಾಸಿಕ ಮಹತ್ವವನ್ನೂ ಸೆರೆಹಿಡಿಯುತ್ತವೆ.
ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಹ್ಮದಾಬಾದ್‌ನಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು ವಾರದ ಅತ್ಯಂತ ದೊಡ್ಡ ಸುದ್ದಿಯಾಗಿದೆ. ದುರಂತವನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಸ್ಥಳಕ್ಕೆ ಧಾವಿಸಿದ್ದು ಸಹಜವೇ ಆಗಿದೆ. ಈ ಸಲ ಸ್ಥಳೀಯ ಪೋಲಿಸರು ಮತ್ತು ಆಡಳಿತ ವರದಿಗಾರಿಕೆಯನ್ನು ತಡೆದಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ದುರಂತದ ಬಳಿಕ ಕೇಂದ್ರ ಗೃಹಸಚಿವರು, ಪ್ರಧಾನಿ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯನ್ನು ಖಚಿತಪಡಿಸುವುದು ಅವರ ಭೇಟಿಯ ಉದ್ದೇಶವಾಗಿತ್ತು. ಮಾಧ್ಯಮಗಳು ಈ ಭೇಟಿಗಳನ್ನು ವ್ಯಾಪಕವಾಗಿ ವರದಿ ಮಾಡಿವೆ. ಪ್ರಧಾನಿಯವರು ಭೇಟಿ ನೀಡಿದಾಗ ವರದಿಗಾರಿಕೆಯು ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ. ಒಂದು ಕಾಲದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಿಪತ್ತಿನ ನಂತರದ ಮೌಲ್ಯಮಾಪನಕ್ಕಾಗಿ (ಹಾಗೆ ಕಂಡಿತ್ತು) ಸ್ಥಳಕ್ಕೆ ಆಗಮಿಸಿದ್ದರು. ಅವರು ಸ್ಥಳದಲ್ಲಿ ನಡೆಯುತ್ತಿದ್ದನ್ನು ಕ್ಯಾಮೆರಾಗಳು ಕ್ಲಿಕ್ಕಿಸಿದ್ದವು. ಆದರೆ ಈ ಬಾರಿ ಇಂತಹ ನಡಿಗೆಯು ಹೆಚ್ಚಿನವರಿಗೆ ಇಷ್ಟವಾಗಿಲ್ಲ.
ಓರ್ವ ಛಾಯಾಗ್ರಾಹಕನಾಗಿ ಮೊದಲ ನಿಯಮವೆಂದರೆ ಸತ್ಯವನ್ನು ಹಾಗೆಯೇ ಉಳಿಸಿಕೊಳ್ಳುವುದು. ಈ ಚಿತ್ರಗಳಲ್ಲಿ ಪ್ರಧಾನಿಯವರು ಯಾವುದೇ ತಜ್ಞರ ನೆರವಿನ ಅಗತ್ಯವಿಲ್ಲ ಎಂಬಂತೆ ಒಬ್ಬಂಟಿಯಾಗಿ ಸ್ಥಳವನ್ನು ಸಮೀಕ್ಷೆ ಮಾಡುತ್ತಿರುವಂತೆ ಕಾಣುತ್ತಿದೆ. ಮೃತರ ಕುಟುಂಬಗಳನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಎಲ್ಲ ಹಕ್ಕು ಅವರಿಗೆ ಇದೆ ಎನ್ನುವುದು ನಿಜವಾಗಿದ್ದರೂ ಚಿತ್ರಗಳು ಪ್ರಧಾನಿ ಮತ್ತು ಅಪಘಾತದ ಸ್ಥಳವನ್ನು ಮಾತ್ರ ಎತ್ತಿ ತೋರಿಸುತ್ತಿರುವಂತಿವೆ.
ಹಿಂದೆಲ್ಲ 2004ರ ಸುನಾಮಿ, ಗುಜರಾತ್ ಗಲಭೆಗಳು, ಭುಜ್ ಭೂಕಂಪ ಅಥವಾ 26/11ರ ಮುಂಬೈ ದಾಳಿಗಳಂತಹ ಅನಾಹುತಗಳು ಸಂಭವಿಸಿದಾಗ ಗಣ್ಯರು ಬಿಕ್ಕಟ್ಟು ಕಳೆದ ನಂತರವೇ ಭೇಟಿ ನೀಡುತ್ತಿದ್ದರು. ಅವರೊಂದಿಗೆ ತಜ್ಞರು ಇರುತ್ತಿದ್ದರು ಮತ್ತು ಪರಿಸ್ಥಿತಿಯನ್ನು ಸಾಮೂಹಿಕವಾಗಿ ನಿರ್ಣಯಿಸುತ್ತಿದ್ದರು. ಇಂದು ದೃಶ್ಯ ನಿರೂಪಣೆಯು ಹೆಚ್ಚಾಗಿ ಒಂದೇ ವ್ಯಕ್ತಿಯನ್ನು ಕೇಂದ್ರೀಕರಿಸಿದೆ-ಈ ಪ್ರಕರಣದಲ್ಲಿ ಪ್ರಧಾನಿ ಮೋದಿ.
ವಾಸ್ತವದಲ್ಲಿ ಅವರ ನಿಕಟ ರಕ್ಷಣಾ ಗುಂಪಿನ ಸದಸ್ಯರು, ಆಡಳಿತದ ಅಧಿಕಾರಿಗಳು, ಪೋಲಿಸ್, ಅಗ್ನಿಶಾಮಕ ಸೇವೆಗಳು ಮತ್ತು ನಾಗರಿಕ ವಾಯುಯಾನ ಮತ್ತು ವಿಪತ್ತು ನಿರ್ವಹಣಾ ತಜ್ಞರು ಸೇರಿದಂತೆ ಇತರ ನೂರಾರು ಜನರೂ ಅವರೊಂದಿಗೆ ಇದ್ದರು. ಆದರೆ ಅವರೆಲ್ಲ ಹೆಚ್ಚಾಗಿ ಚಿತ್ರಗಳಲ್ಲಿ ಇಲ್ಲ. ಪ್ರಚಾರದ ತೆವಲಿನ ಇಂತಹ ದೃಶ್ಯಗಳು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಂವಹನ ನಡೆಸುವ ಸರಕಾರದ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
ಇದು ಇಂತಹ ಮೊದಲ ನಿದರ್ಶನವಲ್ಲ. ಸರಕಾರಗಳು ಮತ್ತು ಅವುಗಳ ಪ್ರಚಾರ ವ್ಯವಸ್ಥೆಗಳು ಸಾರ್ವಜನಿಕ ನಿರೂಪಣೆಗಳನ್ನು ರೂಪಿಸಲು ಇಂತಹ ಚಿತ್ರಗಳನ್ನು ಹೇಗೆ ಬಳಸುತ್ತವೆ ಎನ್ನುವುದನ್ನು ಇಂತಹ ನಿದರ್ಶನಳು ತೋರಿಸುತ್ತವೆ. ಇದಕ್ಕಾಗಿ ಅವು ಹೆಚ್ಚಾಗಿ ಚಿತ್ರಗಳು ಹೇಗೆ ಕಾಣಬೇಕು ಎಂಬ ಬಗ್ಗೆ ತಮ್ಮ ಸ್ಪಷ್ಟ ಸೂಚನೆಗಳನ್ನು ಪಡೆಯುವ ಛಾಯಾಚಿತ್ರಗ್ರಾಹಕರನ್ನು ನೇಮಿಸಿಕೊಳ್ಳುತ್ತವೆ.
ಇತ್ತೀಚಿನ ಏರ್ ಇಂಡಿಯಾ ವಿಮಾನ ಪತನ ಪ್ರಕರಣದಲ್ಲಿ ಮೋದಿಯವರು ಅವಶೇಷಗಳನ್ನು, ನಿರ್ದಿಷ್ಟವಾಗಿ ಕಟ್ಟಡದಿಂದ ಹೊರಚಾಚಿಕೊಂಡಿದ್ದ ಬಾಲದ ರೆಕ್ಕೆಯನ್ನು ವೀಕ್ಷಿಸುತ್ತಿರುವ ಚಿತ್ರವು ಗಮನಾರ್ಹ ಟೀಕೆಗಳಿಗೆ ಗುರಿಯಾಗಿದೆ. ಈ ಚಿತ್ರದ ಚೌಕಟ್ಟು ಅನೇಕರನ್ನು ಕೆರಳಿಸಿದೆ. ಬಹುಶಃ ಸ್ಥಳಾವಕಾಶದ ಕೊರತೆಯಿಂದ ಛಾಯಾಗ್ರಾಹಕ ಕಡಿಮೆ ಕೋನವನ್ನು ಬಳಸಿರಬಹುದು. ಆದರೆ ಚಿತ್ರವನ್ನು ಹೆಚ್ಚು ನಾಟಕೀಯವಾಗಿಸಲು ಹೀಗೆ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.
ಛಾಯಾಗ್ರಹಣವು ಕೇವಲ ಒಂದು ವಾಸ್ತವದ ವ್ಯಾಖ್ಯಾನವಾಗಿದೆ. ಛಾಯಾಚಿತ್ರಗಳು ಇತಿಹಾಸದ ದಾಖಲೆಗಳಾಗುತ್ತವೆ. ಮುಖ್ಯವಾದ ಕ್ಷಣಗಳ ಪುರಾವೆಗಳಾಗುತ್ತವೆ. ಆದರೆ ಅವುಗಳಲ್ಲಿ ಕೈವಾಡ ತೋರಿಸಿದಾಗ ಅವು ತಮ್ಮ ನೈತಿಕ ಬುನಾದಿಯನ್ನು ಕಳೆದುಕೊಳ್ಳುತ್ತವೆ.
ನೈತಿಕತೆಯು ಆಧುನಿಕ ಫೋಟೊಜರ್ನಲಿಸಮ್‌ನಲ್ಲಿ ಗಂಭೀರ ಕಾಳಜಿಯಾಗಿದೆ. ಛಾಯಾಗ್ರಾಹಕರು ಸೂಕ್ಷ್ಮತೆಯನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಅವರು ಏನಾಗಿದೆ ಎನ್ನುವುದನ್ನು ಜಗತ್ತಿಗೆ ತೋರಿಸುವ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ.
ಸೌಜನ್ಯ: thewire.in