ಇನ್ನು ನಾಲ್ಕಾರು ತಿಂಗಳಲ್ಲಿ ಪೆಟ್ರೋಲ್ ಕಾರು ದರದಲ್ಲಿ ಇವಿ ವಾಹನಗಳು ಲಭ್ಯ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ (File Photo: PTI)
ಹೊಸದಿಲ್ಲಿ: ಭಾರತದಲ್ಲಿ ಮುಂದಿನ ನಾಲ್ಕಾರು ತಿಂಗಳಲ್ಲಿ ಪೆಟ್ರೋಲ್ ಕಾರುಗಳ ದರದಲ್ಲಿ ವಿದ್ಯುತ್ ಚಾಲಿತ ವಾಹನಗಳು (ಇವಿ) ಲಭ್ಯವಾಗುವ ನಿರೀಕ್ಷೆ ಇದೆ ಎಂದು ಸೋಮವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
20ನೇ ಫಿಕ್ಕಿ ಉನ್ನತ ಶಿಕ್ಷಣ ಶೃಂಗಸಭೆ, 2025ರಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, "ಭಾರತವು ಪಳೆಯುಳಿಕೆ ಇಂಧನದ ಮೇಲೆ ಅವಲಂಬಿತವಾಗಿರುವುದರಿಂದ ಆರ್ಥಿಕ ಹಾಗೂ ಪರಿಸರಾತ್ಮಕ ಹೊರೆಗಳೆರಡನ್ನೂ ಎದುರಿಸುತ್ತಿದೆ. ಪಳೆಯುಳಿಕೆ ಇಂಧನದ ಆಮದಿಗಾಗಿ ಭಾರತ ಪ್ರತಿ ವರ್ಷ 22 ಲಕ್ಷ ಕೋಟಿ ರೂ. ವ್ಯಯಿಸುತ್ತಿದ್ದು, ನೈಸರ್ಗಿಕ ಅಪಾಯಗಳಿಗೂ ಒಳಗಾಗುತ್ತಿದೆ. ಹೀಗಾಗಿ, ದೇಶದ ಪ್ರಗತಿಗೆ ಶುದ್ಧ ಇಂಧನದ ಅಳವಡಿಕೆ ಪ್ರಮುಖವಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಮುಂದಿನ ನಾಲ್ಕಾರು ತಿಂಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳ ಬೆಲೆಗೆ ಸರಿಸಮವಾಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಇನ್ನು ಐದು ವರ್ಷಗಳಲ್ಲಿ ಭಾರತವನ್ನು ಆಟೊಮೊಬೈಲ್ ಉದ್ಯಮ ವಲಯದಲ್ಲಿ ಇಡೀ ಜಗತ್ತಿನಲ್ಲೇ ಅಗ್ರಸ್ಥಾನಕ್ಕೇರಿಸುವುದು ನಮ್ಮ ಗುರಿಯಾಗಿದೆ" ಎಂದೂ ಅವರು ಘೋಷಿಸಿದ್ದಾರೆ.