×
Ad

ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಗಳನ್ನು ನಿಲ್ಲಿಸಿ ಡಬ್ಲ್ಯುಟಿಒ ವಿರುದ್ಧ ರೈತರ ಪ್ರತಿಭಟನೆ

Update: 2024-02-26 21:47 IST

ಸಾಂದರ್ಭಿಕ ಚಿತ್ರ| Photo: PTI

ಹೊಸದಿಲ್ಲಿ : ಜಾಗತಿಕ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ಒಪ್ಪಂದದಿಂದ ಕೃಷಿ ಕ್ಷೇತ್ರವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸೋಮವಾರ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್ಕೆಎಂ) ನೇತೃತ್ವದಲ್ಲಿ ರೈತರು ಪಂಜಾಬ ಮತ್ತು ಹರ್ಯಾಣಗಳ ಹಲವು ಕಡೆಗಳಲ್ಲಿ ತಮ್ಮ ಟ್ರ್ಯಾಕ್ಟರ್ಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ‘ದಿಲ್ಲಿ ಚಲೋ’ ಆಂದೋಲನವನ್ನು ಭದ್ರತಾ ಪಡೆಗಳು ತಡೆದ ಬಳಿಕ ಸಾವಿರಾರು ರೈತರು ಹರ್ಯಾಣ-ಪಂಜಾಬ ಗಡಿಯ ಖನೌರಿ ಮತ್ತು ಶಂಭುಗಳಲ್ಲಿ ಬಾಕಿಯಾಗಿರುವ ನಡುವೆಯೇ ಇಂದಿನ ಟ್ರ್ಯಾಕ್ಟರ್ ಪ್ರತಿಭಟನೆ ನಡೆದಿದೆ. ವಿವಿಧ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಪಂಜಾಬಿನ ಹೋಷಿಯಾರ್ಪುರದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದೋಬಾ ಕಿಸಾನ್‌ ಕಮಿಟಿಯ ರಾಜ್ಯಾಧ್ಯಕ್ಷ ಜಂಗವೀರ್ ಸಿಂಗ್ ಚೌಹಾಣ ಅವರು, ಡಬ್ಲ್ಯುಟಿಒ ನೀತಿಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದ ನೊಯ್ಡಾದ ಯಮುನಾ ಎಕ್ಸ್ಪ್ರೆಸ್ವೇ ದಲ್ಲಿ ಪ್ರತಿಭಟನಾನಿರತ ರೈತರ ಟ್ರ್ಯಾಕ್ಟರ್ ಜಾಥಾದಿಂದಾಗಿ ದಿಲ್ಲಿಗೆ ತೆರಳುವ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ವ್ಯಾಪಕ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಯಾವುದೇ ಅಹಿತಕರ ಘಟನೆಯನ್ನು ತಡೆಯಲು ದಿಲ್ಲಿ-ನೊಯ್ಡಾ ಗಡಿಯನ್ನು ಮುಚ್ಚಲಾಗಿತ್ತು. ದಿಲ್ಲಿ ಮತ್ತು ನೊಯ್ಡಾದ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು.

ಮೀರತ್ ,ಸಹರಾನಪುರ,ಬಾಘಪತ್ ಸೇರಿದಂತೆ ಉ.ಪ್ರದೇಶದ ಹಲವು ನಗರಗಳಲ್ಲಿ ರೈತರು ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿತ್ತು.

ಹರ್ಯಾಣ ಪೋಲಿಸರ ದೌರ್ಜನ್ಯ ಖಂಡಿಸಿದ ಅಮರಿಂದರ್ ಸಿಂಗ್

ಖನೌರಿ ಗಡಿಯಲ್ಲಿ ಪ್ರತಿಭಟನೆ ವೇಳೆ ಗಾಯಗೊಂಡಿರುವ ರೈತ ಪೀತಿಪಾಲ ಸಿಂಗ ಮೇಲೆ ಹರ್ಯಾಣ ಪೋಲಿಸರ ದೌರ್ಜನ್ಯವನ್ನು ಹಿರಿಯ ಬಿಜೆಪಿ ನಾಯಕ ಹಾಗೂ ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದಾರೆ.

ಚಂಡಿಗಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಮೇಲೆ ಹಲ್ಲೆ ನಡೆಸಿದ ಪೋಲಿಸರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರನ್ನು ಸಿಂಗ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News