ಕೇರಳ | ಮಹಿಳೆಯನ್ನು ರಕ್ಷಿಸಲು ಬಾವಿಗೆ ಇಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸಹಿತ ಮೂವರು ಮೃತ್ಯು
ಸಾಂದರ್ಭಿಕ ಚಿತ್ರ
ಕೊಲ್ಲಂ: ಬಾವಿಗೆ ಜಿಗಿದ ಮಹಿಳೆಯೊಬ್ಬರನ್ನು ರಕ್ಷಿಸುವ ಪ್ರಯತ್ನದಲ್ಲಿ ಓರ್ವ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಸೋಮವಾರ ಕೇರಳದ ನೆಡುವತ್ತೂರ್ ನಲ್ಲಿ ನಡೆದಿದೆ.
ಮೃತರನ್ನು ನೆಡುವತ್ತೂರ್ ನಿವಾಸಿ ಅರ್ಚನಾ, ಆಕೆಯ ಸ್ನೇಹಿತ ಶಿವಕೃಷ್ಣನ್ ಹಾಗೂ ಕೊಟ್ಟರಕ್ಕರ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿ ಸೋನಿ ಎಸ್.ಕುಮಾರ್ ಎಂದು ಗುರುತಿಸಲಾಗಿದೆ.
ರವಿವಾರ ಸುಮಾರು ಮಧ್ಯರಾತ್ರಿಯಲ್ಲಿ ನೆಡುವತ್ತೂರ್ ನಲ್ಲಿ ಬಾವಿಯೊಂದಕ್ಕೆ ಮಹಿಳೆಯೊಬ್ಬರು ಜಿಗಿದಿದ್ದಾರೆ ಎಂಬ ಕರೆ ಕೊಟ್ಟರಕ್ಕರ ಅಗ್ನಿಶಾಮಕ ಠಾಣೆಗೆ ಬಂದಿತು ಎಂದು ಪೊಲೀಸರು ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ, ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ಆಕೆಯನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸೋನಿ ಎಸ್.ಕುಮಾರ್ ಅವರು ಸುಮಾರು 80 ಅಡಿ ಆಳದ ಬಾವಿಗೆ ಇಳಿದರು. ಈ ವೇಳೆ ಬಾವಿಯ ತಡೆಗೋಡೆ ಕುಸಿದಿದ್ದು, ಅದು ಸೋನಿ ಎಸ್.ಕುಮಾರ್ ಹಾಗೂ ಅರ್ಚನಾ ಅವರ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಯ ತಡೆಗೋಡೆ ಕುಸಿದು ಬಿದ್ದಿದ್ದರಿಂದ, ಬಾವಿಯ ಸಮೀಪದಲ್ಲಿದ್ದ ಶಿವಕೃಷ್ಣನ್ ಕೂಡಾ ಬಾವಿಗೆ ಬಿದ್ದರು ಎಂದು ಅವರು ಹೇಳಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನೆಲ್ಲ ಬಾವಿಯಿಂದ ಹೊರಗೆ ತೆಗೆದರು. ಕೂಡಲೇ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ.