×
Ad

16ನೇ ಜನಗಣತಿ | ಮನೆಪಟ್ಟಿ ಕಾರ್ಯದೊಂದಿಗೆ 2026ರ ಎ.1ರಿಂದ ಮೊದಲ ಹಂತ ಆರಂಭ: ರಿಜಿಸ್ಟ್ರಾರ್ ಜನರಲ್

Update: 2025-06-29 21:55 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮುಂಬರುವ ಜನಗಣತಿಯ ಮೊದಲ ಹಂತವಾಗಿ ಮನೆಗಳ ಪಟ್ಟಿಯನ್ನು ತಯಾರಿಸುವ ಕಾರ್ಯ 2026ರ ಎ.1ರಿಂದ ಆರಂಭವಾಗಲಿದೆ ಎಂದು ಭಾರತದ ಮಹಾ ನೋಂದಣಾಧಿಕಾರಿ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ನಾರಾಯಣ್ ಅವರು ತಿಳಿಸಿದ್ದಾರೆ.

ನಾರಾಯಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಅದಕ್ಕೂ ಮುನ್ನ ರಾಜ್ಯಗಳು ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಮೇಲ್ವಿಚಾರಕರು ಮತ್ತು ಗಣತಿದಾರರ ನೇಮಕ ಹಾಗೂ ಅವರಿಗೆ ಕೆಲಸದ ಹಂಚಿಕೆಯನ್ನು ಮಾಡಲಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿಯನ್ನು ಮಾಡಲಾಗುವುದು ಹಾಗೂ ಪ್ರತಿ ಕುಟುಂಬದ ವಸತಿ ಸ್ಥಿತಿ,ಆಸ್ತಿಗಳು ಮತ್ತು ಸೌಲಭ್ಯಗಳ ವಿವರಗಳನ್ನು ಸಂಗ್ರಹಿಸಲಾಗುವುದು.

ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು,ಇಲ್ಲಿ ಪ್ರತಿ ಕುಟುಂದ ಪ್ರತಿ ವ್ಯಕ್ತಿಯ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಹಾಗೂ ಇತರ ವಿವರಗಳು ಸೇರಿದಂತೆ ವೈಯಕ್ತಿಕ ದತ್ತಾಂಶಗಳನ್ನು ಕಲೆಹಾಕಲಾಗುವುದು. ಈ ಪ್ರಕ್ರಿಯೆ 2027, ಫೆ.1ರಿಂದ ಆರಂಭಗೊಳ್ಳಲಿದೆ.

ಜನಗಣತಿ ವೇಳೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂದು ಸರಕಾರದ ಹೇಳಿಕೆಯು ತಿಳಿಸಿತ್ತು.

ಜನಗಣತಿಗಾಗಿ 34 ಲಕ್ಷಕ್ಕೂ ಅಧಿಕ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ 1.3 ಲಕ್ಷ ಜನಗಣತಿ ಕಾರ್ಯಕರ್ತರನ್ನು ನಿಯೋಜಿಸಲಾಗುವುದು.

ಇದು ಭಾರತದ ಈವರೆಗಿನ 16ನೇ ಮತ್ತು ಸ್ವಾತಂತ್ರ್ಯಾನಂತರ ಎಂಟನೇ ಜನಗಣತಿಯಾಗಲಿದೆ.

ಮುಂಬರುವ ಜನಗಣತಿಯು ಮೊಬೈಲ್ ಆ್ಯಪ್ ಗಳ ಬಳಕೆಯೊಂದಿಗೆ ಡಿಜಿಟಲ್ ವಿಧಾನಗಳಲ್ಲಿ ನಡೆಯಲಿದೆ. ಸ್ವಯಂ-ಗಣತಿಯ ಸೌಲಭ್ಯವು ಜನರಿಗೆ ಲಭ್ಯವಾಗಲಿದೆ.

ರಿಜಿಸ್ಟ್ರಾರ್ ಜನರಲ್ ಕಚೇರಿಯು ಜನರಿಗೆ ಕೇಳಬೇಕಾದ ಸುಮಾರು ಮೂರು ಡಝನ್ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ.

ಜನಗಣತಿಯಲ್ಲಿ ಕುಟುಂಬಗಳು ಹೊಂದಿರುವ ಫೋನ್, ಇಂಟರ್ನೆಟ್, ವಾಹನಗಳು, ಉಪಕರಣಗಳು(ರೇಡಿಯೊ, ಟಿವಿ, ಟ್ರಾನ್ಸಿಸ್ಟರ್) ಇತ್ಯಾದಿಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಧಾನ್ಯಗಳ ಬಳಕೆ, ಕುಡಿಯುವ ನೀರು ಮತ್ತು ಬೆಳಕಿನ ಮೂಲಗಳು, ಶೌಚಾಲಯಗಳ ವಿಧಗಳು ಮತ್ತು ಲಭ್ಯತೆ, ತ್ಯಾಜ್ಯನೀರು ವಿಲೇವಾರಿ, ಸ್ನಾನ ಮತ್ತು ಅಡುಗೆ ಸೌಲಭ್ಯಗಳು, ಅಡುಗೆಗೆ ಬಳಸುವ ಇಂಧನ ಹಾಗೂ ಎಲ್ಪಿಜಿ/ಪಿಎನ್ಐ ಸಂಪರ್ಕದ ಬಗ್ಗೆಯೂ ನಾಗರಿಕರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಮನೆಯ ನೆಲ, ಗೋಡೆ ಮತ್ತು ಛಾವಣಿಗೆ ಬಳಸಲಾದ ಸಾಮಗ್ರಿಗಳು, ಮನೆಯ ಸ್ಥಿತಿ, ನಿವಾಸಿಗಳ ಸಂಖ್ಯೆ, ಕೊಠಡಿಗಳ ಸಂಖ್ಯೆ, ವಿವಾಹಿತ ದಂಪತಿಗಳ ಉಪಸ್ಥಿತಿ ಮತ್ತು ಕುಟುಂಬದ ಮುಖ್ಯಸ್ಥರು ಮಹಿಳೆಯೇ ಅಥವಾ ಎಸ್ಸಿ/ಬುಡಕಟ್ಟು ಸಮುದಾಯಕ್ಕೆ ಸೇರಿದವರೇ ಇವೆಲ್ಲ ಹೆಚ್ಚುವರಿ ಪ್ರಶ್ನೆಗಳಲ್ಲಿ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News