ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡನೆಗೆ ಸಜ್ಜು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವ ನಿರೀಕ್ಷೆಯಿದ್ದು, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರವಿವಾರ ಬಜೆಟ್ ಮಂಡನೆಯಾಗುತ್ತಿದೆ.
ರಾಷ್ಟ್ರಪತಿ ಭಾಷಣದೊಂದಿಗೆ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದೆ. ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ಬುಧವಾರ ಕೈಗೊಳ್ಳಲಿದ್ದು, ಫೆಬ್ರವರಿ 1ರಂದೇ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ 2017ರಿಂದೀಚೆಗೆ ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಾ ಬಂದಿದೆ. ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಈ ಸಂಪ್ರದಾಯವನ್ನು ಆರಂಭಿಸಿದ್ದು, ಆ ಬಳಿಕ ಸರ್ಕಾರ ಇದನ್ನೇ ಮುಂದುವರಿಸಿಕೊಂಡು ಬಂದಿದೆ. 2017ಕ್ಕೆ ಮುನ್ನ ಫೆಬ್ರವರಿ 28ರಂದು ಬಜೆಟ್ ಮಂಡನೆಯಾಗುತ್ತಿತ್ತು.
ಈ ಬಾರಿ ಫೆಬ್ರವರಿ 1 ರವಿವಾರವಾಗಿದ್ದು, ಇದು ಗುರು ರವಿದಾಸ್ ಅವರ ಜಯಂತಿಯ ದಿನವೂ ಆಗಿದೆ. ಇದು ನಿರ್ಬಂಧಿತ ರಜಾದಿನ. ರಜಾದಿನವಾಗಿದ್ದರಿಂದ ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆ ಮುಚ್ಚಿರುತ್ತದೆ.
ಜನವರಿ 29ರಂದು ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಬಳಿಕ ಜನವರಿ 30 ಮತ್ತು 31 ರಜಾದಿನವಾಗಿರುತ್ತದೆ. ಮೊದಲ ಹಂತದಲ್ಲಿ ಬಜೆಟ್ ಅಧಿವೇಶನ ಮೂರು ವಾರಗಳ ಕಾಲ ನಡೆಯಲಿದ್ದು, ಎರಡನೇ ಭಾಗ ನಾಲ್ಕು ವಾರ ನಡೆಯುತ್ತದೆ.