ಸರ್ಕಾರದ ಯೋಜನೆಗಳ ನೆರವಿನಿಂದ ದೇಶದಾದ್ಯಂತ ಲಕ್ಷಾಂತರ ಮಂದಿ ಬಡತನದಿಂದ ಹೊರಬಂದಿದ್ದಾರೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು (Photo:X/ANI)
ಹೊಸದಿಲ್ಲಿ: ಮಧ್ಯಮ ವರ್ಗದವರ ಸ್ವಂತ ಮನೆ ಕನಸನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ. ಮೂರು ಕೋಟಿ ಹೆಚ್ಚುವರಿ ಕುಟುಂಬಗಳಿಗೆ ಹೊಸ ಮನೆಗಳನ್ನು ಒದಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲು 2025ರ ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ಇದಲ್ಲದೆ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈಶಾನ್ಯ ರಾಜ್ಯದ ಜನರಲ್ಲಿ ಪರಕೀಯತೆಯ ಭಾವನೆ ಕೊನೆಗೊಳಿಸಲು ಸರ್ಕಾರವು ಪ್ರಯತ್ನಗಳನ್ನು ಮಾಡಿದೆ, ಆದರೂ ಮಣಿಪುರದ ಅಶಾಂತಿ 2023ರಿಂದ ಮುಂದುವರಿದಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ. ಭಾರತವನ್ನು ಜಾಗತಿಕ ನಾವೀನ್ಯತೆ ಶಕ್ತಿ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಸರ್ಕಾರದ ಯೋಜನೆಗಳ ನೆರವಿನಿಂದ ದೇಶದಾದ್ಯಂತ ಲಕ್ಷಾಂತರ ಮಂದಿ ಬಡತನದಿಂದ ಹೊರಬಂದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಮತ್ತು ಮೇಲ್ಪಟ್ಟ ಆರು ಕೋಟಿ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯತ್ತ ಸರ್ಕಾರ ಕ್ರಮ ಕೈಗೊಂಡಿದೆ. ನಾವು ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದೇವೆ. ಎಲ್ಲಾ ಭಾರತೀಯರ ಪರವಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಸಮಿತಿಯಲ್ಲಿರುವ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.