×
Ad

ಹಾಲು ಉತ್ಪಾದಕತೆ ಹೆಚ್ಚಿಸುವ ಕೇಂದ್ರದ ಪ್ರಮುಖ ಯೋಜನೆಗೆ ನಿಧಿಯ ಕೊರತೆ!

Update: 2025-03-08 16:06 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸ್ಥಳೀಯ ತಳಿಯ ಜಾನುವಾರುಗಳ ಹಾಲು ಉತ್ಪಾದಕತೆ ಹೆಚ್ಚಿಸುವ ಕೇಂದ್ರದ ಪ್ರಮುಖ ಯೋಜನೆ ಕಳೆದ ಎರಡು ವರ್ಷಗಳಿಂದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದ ವಿಶ್ವದ ಮೂರನೇ ಒಂದು ಭಾಗದಷ್ಟು ಹಾಲು ಉತ್ಪಾದನೆಯ ಕೇಂದ್ರವಾಗಬೇಕೆಂಬ ಭಾರತದ ಕನಸಿಗೆ ಅಡ್ಡಿಯುಂಟು ಮಾಡಲಿದೆ ಎಂದು newindianexpress.com ವರದಿಯಲ್ಲಿ ಉಲ್ಲೇಖಿಸಿದೆ.

2021ರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ (RGM) ಯೋಜನೆ ಪ್ರಾರಂಭಿಸಲಾಗಿದೆ. ಸ್ಥಳೀಯ ತಳಿಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಕೃತಕ ಗರ್ಭಧಾರಣೆ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಲು ಐದು ವರ್ಷಗಳಲ್ಲಿ ಈ ಯೋಜನೆ ಜಾರಿಗೆ ತರಬೇಕಿತ್ತು.

ಈ ಯೋಜನೆಯಡಿ ಮಂಜೂರು ಮಾಡಲಾದ 2,400 ಕೋಟಿ ರೂ. ನಿಧಿಯು ಯೋಜನೆಯ ಮೊದಲ ಮೂರು ವರ್ಷಗಳಲ್ಲಿ ಮುಗಿದಿದೆ. ಹಾಲಿನ ಉತ್ಪಾದನೆಯನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಜಾನುವಾರು ಸಾಕಣೆದಾರರಿಂದ ಬೇಡಿಕೆಗಳು ಹೆಚ್ಚುತ್ತಿರುವ ಕಾರಣ ಈ ಯೋಜನೆಯಡಿ ಕಾರ್ಯವನ್ನು ಪೂರ್ಣಗೊಳಿಸಲು ನಮಗೆ ಕನಿಷ್ಠ 1,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಧಿಕಾರಿಯೋರ್ವರು ಹೇಳಿರುವ ಬಗ್ಗೆ ವರದಿಯು ತಿಳಿಸಿದೆ.

2025-26ರ ಬಜೆಟ್‌ನಲ್ಲಿ ಆರ್‌ಜಿಎಂ ಯೋಜನೆಯಡಿ ಯಾವುದೇ ನಿಧಿಯನ್ನು ಮೀಸಲಿರಿಸಿಲ್ಲ, ಕಳೆದ ಬಜೆಟ್‌ನಲ್ಲಿ ಅಂದಾಜು 268 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ. ಮಂಜೂರು ಮಾಡಲಾದ 2,400 ಕೋಟಿ ರೂ. ಮೊದಲ ಮೂರು ವರ್ಷಗಳಲ್ಲಿ ಮುಗಿದಿದೆ ಮತ್ತು ಅದರ ಗುರಿಯ 80% ಅನ್ನು ಸಾಧಿಸಿದೆ.

ಈ ಯೋಜನೆಯು 5 ಕೋಟಿಗೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಲಿನ ಉತ್ಪಾದನೆ ಮತ್ತು ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ರೈತರು ಇತರ ರಾಜ್ಯಗಳಿಗಿಂತ ಈ ಯೋಜನೆಯಿಂದ ಹೆಚ್ಚಿನ ಲಾಭ ಪಡೆದಿದ್ದಾರೆ. ಈ ಯೋಜನೆ ಕುರಿತ ಆಂತರಿಕ ಮೌಲ್ಯಮಾಪನವು ಸಣ್ಣ ಮತ್ತು ಅತಿಸಣ್ಣ ರೈತರ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆ ಸಹಾಯ ಮಾಡಿದೆ ಎಂದು ತಿಳಿಸಿದೆ.

ಹಾಲು ಉತ್ಪಾದನೆಯು ಭಾರತದ GDPಗೆ ಸುಮಾರು 5% ದಷ್ಟು ಕೊಡುಗೆ ನೀಡುತ್ತದೆ. 8 ಕೋಟಿಗೂ ಹೆಚ್ಚು ರೈತರಿಗೆ, ವಿಶೇಷವಾಗಿ ಸಣ್ಣ, ಕನಿಷ್ಠ ಮತ್ತು ಮಹಿಳಾ ರೈತರಿಗೆ ಉದ್ಯೋಗವನ್ನು ಒದಗಿಸಿದೆ. ಪ್ರಸ್ತುತ ಭಾರತ ವಿಶ್ವದ ಅಗ್ರ ಹಾಲು ಉತ್ಪಾದಕ ದೇಶವಾಗಿದೆ. ವಿಶ್ವದ ಒಟ್ಟು ಹಾಲಿನ ಉತ್ಪಾದನೆಗೆ 25% ಕೊಡುಗೆ ನೀಡುತ್ತದೆ.

ವಿಶ್ವದ ಮೂರನೇ ಒಂದು ಭಾಗದಷ್ಟು ಹಾಲು ಉತ್ಪಾದನೆಯ ಕೇಂದ್ರವಾಗಬೇಕೆಂಬ ಗುರಿಯನ್ನು ಭಾರತ ಹೊಂದಿದೆ. 2030ರ ವೇಳೆಗೆ ಜಾಗತಿಕ ಹಾಲಿನ ಉತ್ಪಾದನೆಯಲ್ಲಿ ಮೂರನೇ ಒಂದು ಭಾಗವನ್ನು ಸಾಧಿಸುವ ಭಾರತದ ಗುರಿಗೆ ನಿಧಿಯ ಬಿಕ್ಕಟ್ಟು ಅಡ್ಡಿಯುಂಟು ಮಾಡಲಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಅಧಿಕಾರಿಯೋರ್ವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News