ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ
ನಾಸಿಕ್: ವಿವಾಹ ಸೀಸನ್ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಶನಿವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 91 ಸಾವಿರ ರೂಪಾಯಿ ಆಗಿದ್ದು, ಚಿನ್ನದ ಬೆಲೆ ಮಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ನಾಸಿಕ್ ಹಾಗೂ ಜಲಗಾಂವ್ ಚಿನ್ನದ ವ್ಯಾಪಾರಿಗಳು ಹೇಳಿದ್ದಾರೆ.
ಚಿನ್ನದ ಪರಿಶುದ್ಧತೆ ಮತ್ತು ಅದ್ಭುತ ಕುಸುರಿ ಕೆಲಸದ ಕಾರಣದಿಂದ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಗ್ರಾಹಕರನ್ನು ಸೆಳೆಯುವ ಜಲಗಾಂವ್ ನಲ್ಲಿ ಚಿನ್ನದ ಬೇಟೆ ಮುಂದುವರಿದಿದೆ.
"ಶನಿವಾರ ತೆರಿಗೆ ಸೇರಿ 10 ಗ್ರಾಂ ಚಿನ್ನದ ಬೆಲೆ 91,052 ರೂಪಾಯಿ ಆಗಿತ್ತು. ಇದು ಶುಕ್ರವಾರ 91,600 ಆಗಿತ್ತು. ವ್ಯಾಪಾರದ ಮೇಲೆ ಅಮೆರಿಕ ಕೈಗೊಂಡ ಕ್ರಮ ಸೇರಿದಂತೆ ಅಂತಾರಾಷ್ಟ್ರೀಯ ಬೆಳವಣಿಗೆಗಳಿಗೆ ಮಾರುಕಟ್ಟೆ ಬೆಲೆ ಸ್ಪಂದಿಸುತ್ತಿದೆ. ಚಿನ್ನದ ಮೇಲೆ ಹೂಡಿಕೆ ಅತ್ಯುತ್ತಮ ಎನ್ನುವುದನ್ನು ಜನ ಇಂದಿಗೂ ಪರಿಗಣಿಸುತ್ತಿದ್ದಾರೆ" ಎಂದು ಚಿನ್ನದ ವ್ಯಾಪಾರಿ ಸುಶೀಲ್ ಬಾಫ್ನಾ ಹೇಳುತ್ತಾರೆ.
ಜಲಗಾಂವ್ ಚಿನ್ನದ ವ್ಯಾಪಾರಿಗಳಲ್ಲಿ ತೀವ್ರ ಪೈಪೋಟಿ ಗ್ರಾಹಕರಿಗೆ ಲಾಭ ತರುತ್ತಿದೆ. ಅತ್ಯುತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಾಗುವುದನ್ನು ಖಾತರಿಪಡಿಸುತ್ತಿದೆ.