×
Ad

ಟ್ರಂಪ್ ಸುಂಕಾಸ್ತ್ರದಿಂದ ಗುಜರಾತಿನ ವಜ್ರೋದ್ಯಮಕ್ಕೆ ಸಂಕಷ್ಟ; ಒಂದು ಲಕ್ಷ ಉದ್ಯೋಗ ನಷ್ಟ!

ರಫ್ತು ಆದೇಶಗಳ ಕೊರತೆ

Update: 2025-08-12 22:13 IST

ಡೊನಾಲ್ಡ್ ಟ್ರಂಪ್ | PC : X 

ಅಹ್ಮದಾಬಾದ್,ಆ.12: ಗುಜರಾತಿನ ವಜ್ರ ಕಾರ್ಮಿಕರ ಒಕ್ಕೂಟದ ಪ್ರಕಾರ ಕಳೆದ ಎಪ್ರಿಲ್‌ ನಲ್ಲಿ ಅಮೆರಿಕವು ಶೇ.10ರಷ್ಟು ಮೂಲಸುಂಕವನ್ನು ವಿಧಿಸಿದ ಬಳಿಕ ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿ ವಜ್ರಗಳನ್ನು ಕತ್ತರಿಸುವ ಮತ್ತು ಪಾಲಿಷ್ ಮಾಡುವ ಸುಮಾರು ಒಂದು ಲಕ್ಷ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ

ಸುಂಕವನ್ನು ಮೊದಲು ಶೇ.25ರಷ್ಟು ಹೆಚ್ಚಿಸಿ, ನಂತರ ಶೇ.50ರಷ್ಟು ಹೆಚ್ಚಿಸಿದ ಕಳೆದ 10 ದಿನಗಳಲ್ಲಿ ಕಾರ್ಮಿಕರ ವಜಾ ಪ್ರಕ್ರಿಯೆಯು ವೇಗ ಪಡೆದುಕೊಂಡಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಭಾವೇಶ ಟಾಂಕ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಒರಟು ವಜ್ರಗಳನ್ನು ಕತ್ತರಿಸಿ, ಹೊಳಪು ನೀಡುವ ತುಂಡು ಕೆಲಸಗಳನ್ನು ದೊಡ್ಡ ಕಂಪನಿಗಳಿಂದ ಪಡೆದುಕೊಳ್ಳುವ ಭಾವನಗರ, ಅಮ್ರೇಲಿ ಮತ್ತು ಜುನಾಗಡಗಳಲ್ಲಿಯ ಸಣ್ಣ ಘಟಕಗಳಲ್ಲಿ ಹೆಚ್ಚಿನ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಅಮೆರಿಕದ ಖರೀದಿದಾರರಿಂದ ಅನೇಕ ರಫ್ತು ಆರ್ಡರ್ ಗಳು ವಿಳಂಬಗೊಂಡಿವೆ ಅಥವಾ ರದ್ದುಗೊಂಡಿವೆ.

ಸೌರಾಷ್ಟ್ರ, ಜುನಾಗಡ, ಭಾವನಗರ ಮತ್ತು ಅಮ್ರೇಲಿಗಳಲ್ಲಿ ಹರಡಿಕೊಂಡಿರುವ ಈ ಸಣ್ಣ ಘಟಕಗಳು ಮೂರರಿಂದ ನಾಲ್ಕು ಲಕ್ಷ ಜನರನ್ನು ನೇಮಿಸಿಕೊಂಡಿವೆ. ಚೀನಾ ಮತ್ತು ಅಮೆರಿಕದಿಂದ ವಜ್ರಗಳ ಖರೀದಿ ನಿಧಾನಗೊಂಡಿದ್ದರಿಂದ ಈ ಸ್ಥಳಗಳಲ್ಲಿ ವ್ಯವಹಾರವು ಕ್ಷೀಣಿಸುತ್ತಿತ್ತು. ಆದರೆ ಎಪ್ರಿಲ್‌ ನಲ್ಲಿ ಪ್ರಕಟಿಸಲಾದ ಅಮೆರಿಕ ಸುಂಕಗಳು ದೊಡ್ಡ ಹೊಡೆತವನ್ನು ನೀಡಿದ್ದು, ಇದರಿಂದ ವಜ್ರ ವ್ಯಾಪಾರದಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿದೆ. ಆಗಿನಿಂದ ವಜ್ರಗಳನ್ನು ಕತ್ತರಿಸುವ ಮತ್ತು ಹೊಳಪು ನೀಡುವ ಕೆಲಸ ಕಡಿಮೆಯಾಗಿದೆ ಮತ್ತು ಕಾರ್ಮಿಕರನ್ನು ತೆಗೆಯಲಾಗಿದೆ ಎಂದು ಹೇಳಿದ ಟಾಂಕ್, ತೊಂದರೆಗೀಡಾಗಿರುವ ಕಾರ್ಮಿಕರು ಮಾಸಿಕ ಸುಮಾರು 15ರಿಂದ 20 ಸಾವಿರ ರೂಪಾಯಿಗಳನ್ನು ಗಳಿಸುತ್ತಿದ್ದರು ಎಂದು ತಿಳಿಸಿದರು.

ಋಣಾತ್ಮಕ ಪ್ರತಿಕ್ರಿಯೆ ಭಯದಿಂದಾಗಿ ಉದ್ಯೋಗ ನಷ್ಟ ಪ್ರಮಾಣದ ಬಗ್ಗೆ ದೊಡ್ಡ ಕಂಪನಿಗಳು ಮೌನವಾಗಿದ್ದರೆ, ಕೆಲಸ ಕಳೆದುಕೊಂಡಿರುವ ಕೆಲವು ಕಾರ್ಮಿಕರು ಪ್ರಯೋಗಾಲಯದಲ್ಲಿ ಬೆಳೆದ ವಜ್ರ(ಎಲ್‌ಜಿಡಿ) ಕ್ಷೇತ್ರದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೂ ಶೇ.50ರಷ್ಟು ಸುಂಕವು ಎಲ್‌ಜಿಡಿ ಕ್ಷೇತ್ರದ ಮೇಲೂ ಪರಿಣಾಮ ಬೀರಿದರೆ ಉದ್ಯೋಗ ಸಮಸ್ಯೆ ತೀವ್ರಗೊಳ್ಳುವ ಕಳವಳಗಳು ಉಳಿದುಕೊಂಡಿವೆ ಎಂದು ಎಚ್ಚರಿಕೆ ನೀಡಿದ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ (ಗುಜರಾತ್ ಪ್ರದೇಶ) ಜಯಂತಿಭಾಯಿ ಸವಾಲಿಯಾ ಅವರು, ಅಮೆರಿಕವು ಎಲ್‌ಜಿಡಿಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ ಎಂದು ತಿಳಿಸಿದರು.

ಭಾರತವು ವಿಶ್ವದ ಅತಿದೊಡ್ಡ ವಜ್ರ ರಫ್ತು ದೇಶವಾಗಿದ್ದು, ಅಮೆರಿಕ ಮತ್ತು ಚೀನಾ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಪೂರೈಸುತ್ತದೆ. ಜಾಗತಿಕವಾಗಿ ಪ್ರತಿ ಹತ್ತು ವಜ್ರಗಳ ಪೈಕಿ ಒಂಭತ್ತನ್ನು ಭಾರತದಲ್ಲಿ ಕತ್ತರಿಸಿ ಹೊಳಪು ನೀಡಲಾಗುತ್ತದೆ. ವಿತ್ತವರ್ಷ 25ರಲ್ಲಿ ಭಾರತವು ಅಮೆರಿಕಕ್ಕೆ 10 ಶತಕೋಟಿ ಡಾಲರ್ ಮೌಲ್ಯದ ರತ್ನಗಳು ಮತ್ತು ಆಭರಣಗಳನ್ನು ರಫ್ತು ಮಾಡಿದ್ದು, ಇವುಗಳಲ್ಲಿ ಕತ್ತರಿಸಿ ಹೊಳಪು ನೀಡಲಾದ ವಜ್ರಗಳು ಮತ್ತು ವಜ್ರಾಭರಣಗಳು ಸಿಂಹಪಾಲು ಹೊಂದಿದ್ದವು.

ಸುಂಕ ಅಂತರವನ್ನು ನೀಗಿಸಲು ಅಮೆರಿಕದ ಜೊತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ತ್ವರಿತಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿರುವ ಉದ್ಯಮದ ಪ್ರತಿನಿಧಿಗಳು, ಹೆಚ್ಚಿನ ರಫ್ತು ಪ್ರೋತ್ಸಾಹಗಳು, ಬಡ್ಡಿ ಸಹಾಯಧನ ಮತ್ತು ತ್ವರಿತ ಜಿಎಸ್‌ಟಿ ಮರುಪಾವತಿಗಾಗಿ ಕೋರಿಕೊಂಡಿದ್ದಾರೆ.

ಸದ್ಯಕ್ಕೆ, ಎಂಟು ಲಕ್ಷ ಜನರಿಗೆ ಉದ್ಯೋಗ ನೀಡಿರುವ ಸೂರತ್‌ನ ವಜ್ರೋದ್ಯಮಕ್ಕೆ ಹೋಲಿಸಿದರೆ ಸಣ್ಣ ಪಟ್ಟಣಗಳು ಉದ್ಯೋಗ ನಷ್ಟದ ಹೆಚ್ಚಿನ ಬಿಸಿಯನ್ನು ಅನುಭವಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News