×
Ad

ಕೇರಳದಲ್ಲಿ ಮುಂದುವರಿದ ಭಾರೀ ಮಳೆ | ಓರ್ವ ಮೃತ್ಯು, 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

Update: 2025-10-20 21:18 IST

Photo Credit :  PTI

ತಿರುವನಂತಪುರ, ಅ. 20: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಇಡುಕ್ಕಿ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ.

ಅರಬಿ ಸಮುದ್ರದಲ್ಲಿ ರೂಪುಗೊಂಡಿರುವ ವಾಯು ಭಾರ ಕುಸಿತದಿಂದಾಗಿ ಬುಧವಾರದವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರ್ನಾಕುಳಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲೆರ್ಟ್ ಹೊರಡಿಸಿದ್ದು, ಹಗಲಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೇರಳ ಹಾಗೂ ದಕ್ಷಿಣ ಭಾರತದ ಹಲವು ಇತರ ಭಾಗಗಳಲ್ಲಿ ಅಕ್ಟೋಬರ್ 26ರಿಂದ ಈಶಾನ್ಯ ಮನ್ಸೂನ್ ಆರಂಭವಾಗಲಿದೆ. ಭಾರೀ ಮಳೆಯ ನಡುವೆ ಇಡುಕ್ಕಿಯಲ್ಲಿರುವ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಶನಿವಾರ ಪೆರಿಯಾರ್ ನದಿಗೆ ಬಿಡಲಾಗಿದೆ. ಇದರಿಂದ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ನೆರೆ ಸಂಭವಿಸಿದೆ.

ರಾಜ್ಯ ಕಂದಾಯ ಸಚಿವ ಕೆ. ರಾಜನ್ ಮುನ್ನೆಚ್ಚರಿಕೆವಹಿಸುವಂತೆ ಹಾಗೂ ಅಕ್ಟೋಬರ್ 24ರ ವರೆಗೆ ಬೆಟ್ಟದ ದಾರಿಗಳಲ್ಲಿ ರಾತ್ರಿ ವಾಹನದಲ್ಲಿ ಸಂಚರಿಸದಂತೆ ನಾಗರಿಕರಿಗೆ ಸೂಚನೆ ನೀಡಿದ್ದಾರೆ.

ಒನ್ನಾಮ್ ಮೈಲ್, ಅಟ್ಟ ಪಾಲಂ, ಕುಮಿಲಿ ಪಟ್ಟಣ, ಪೆರಿಯಾರ್ ಕಾಲನಿ, ಚೆಲಿಮಲ, ವಲಿಯಕಂಡನ್ ಹಾಗೂ ಅನವಾಚಲ್ ಸೇರಿದಂತೆ ಕುಮಿಲಿಯ ಇತರ ಹಲವು ಪ್ರದೇಶಗಳಲ್ಲಿ ಕೂಡ ನೆರೆ ಹಾಗೂ ಭೂಕುಸಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಮಲಪ್ಪುರಂ ಜಿಲ್ಲೆಯ ವಝಿಕ್ಕಡವಿನಲ್ಲಿ ಹಲವು ರಸ್ತೆಗಳು ಹಾಗೂ ಸುಮಾರು 50 ಮನೆಗಳು ಜಲಾವೃತವಾಗಿವೆ. ಜಿಲ್ಲೆಯ ಗುಡಲ್ಲೂರು-ಕೋಝಿಕ್ಕೋಡ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಭಾರೀ ಮಳೆಯಿಂದ ಜಿಲ್ಲೆಯ ಕಾರ್ಕೋಡಂ, ಕಾಲಕ್ಕಾಡ್ ಹಾಗೂ ಅತಿತೋಡ್ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News