ಕೇದಾರನಾಥದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಎಲ್ಲಾ ಮೂವರು ಪಾರು
PC : NDTV
ಕೇದಾರನಾಥ: ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರೊಂದು ಉತ್ತರಾಖಂಡದ ಕೇದಾರನಾಥದಲ್ಲಿ ಶನಿವಾರ ತುರ್ತುಭೂಸ್ಪರ್ಶ ಮಾಡಿದ್ದು, ಅದರಲ್ಲಿದ್ದ ಮೂವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಶಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಸೇರಿದ ಈ ಹೆಲಿಕಾಪ್ಟರ್, ರೋಗಿಯೊಬ್ಬರನ್ನು ಕೊಂಡೊಯ್ಯಲು ಕೇದಾರನಾಥ್‌ಗೆ ಆಗಮಿಸಿತ್ತು.
ಹೆಲಿಕ್ಟಾಪರ್‌ನ ಹಿಂಭಾಗದಲ್ಲಿರುವ ಟೇಲ್ ರೋಟೊರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತೆಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಮೂರು ಮಂದಿ ಸುರಕ್ಷಿತರಾಗಿದ್ದಾರೆಂದು ಕೇದಾರನಾಥ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ.
ಹೆಲಿಪ್ಯಾಡ್‌ನಿಂದ ಕೇವಲ 10 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತುಭೂಸ್ಪರ್ಶ ಮಾಡಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಪರಿಹಾರ ಕಾರ್ಯಕರ್ತರು ತಕ್ಷಣವೇ ಸ್ಥಳಕ್ಕೆ ಧಾವಿಸಿದರೆಂದು ವರದಿಗಳು ತಿಳಿಸಿವೆ.
ಘಟನೆಯ ಬಗ್ಗೆ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು ತನಿಖೆ ನಡೆಸಲಿದೆಯೆಂದು ಚೌಬೆ ತಿಳಿಸಿದ್ದಾರೆ.
ಚಾರ್‌ಧಾಮ ಯಾತ್ರೆಯ ಸಂದರ್ಭದಲ್ಲಿ ಹೆಲಿಕಾಪ್ಟರ್ ಅವಘಡದ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ, ಮೇ 8ರಂದು ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗಾನಾನಿ ಸಮೀಪ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸಹಿತ 8 ಮಂದಿ ಸಾವನ್ನಪ್ಪಿದ್ದರು.