ನನ್ನ ತಾಯಿಯನ್ನು ಅವಮಾನಿಸಿದ ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳನ್ನು ನಾನು ಕ್ಷಮಿಸಿದರೂ ಬಿಹಾರದ ಜನತೆ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಬಿಹಾರದಲ್ಲಿನ ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ವಿರುದ್ಧ ಇಂದು ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳ ಮೈತ್ರಿಕೂಟದ ವೇದಿಕೆಯ ಮೇಲೆ ನನ್ನ ತಾಯಿಯನ್ನು ನಿಂದಿಸಲಾಗಿದೆ ಹಾಗೂ ಈ ಕೃತ್ಯವು ಎಲ್ಲ ತಾಯಿ ಹಾಗೂ ಸಹೋದರಿಯರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿನ ಮಹಿಳಾ ಉದ್ಯಮಿಗಳಿಗಾಗಿ ಸುಲಭ ಸಾಲ ಒದಗಿಸುವ ಗುರಿ ಹೊಂದಿರುವ ಬಿಹಾರ ರಾಜ್ಯ ಜೀವಿಕಾ ನಿಧಿ ಸಾಖ್ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಅವರು ಈ ರೀತಿಯ ಭಾಷೆ ಬಳಕೆ ಮೂಲಕ ಕೇವಲ ನನ್ನ ತಾಯಿಯನ್ನು ಅವಮಾನಿಸಿಲ್ಲ; ಬದಲಿಗೆ, ದೇಶದ ಎಲ್ಲ ತಾಯಿ ಹಾಗೂ ಸಹೋದರಿಯರನ್ನು ಅವಮಾನಿಸಿದ್ದಾರೆ. ಅದನ್ನು ಕೇಳಿಸಿಕೊಂಡ ನೀವು ನನ್ನಷ್ಟೇ ನೋವು ಅನುಭವಿಸಿದ್ದೀರಿ ಎಂದು ನನಗೆ ತಿಳಿದಿದೆ” ಎಂದು ಮೋದಿ ಹೇಳಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಸುಮಾರು 20 ಲಕ್ಷ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅವರು, “ನನ್ನ ದಿವಂಗತ ತಾಯಿ ಹೀರಾಬೆನ್ ಮೋದಿ ನನ್ನನ್ನು ಹಾಗೂ ನನ್ನ ಒಡಹುಟ್ಟಿದವರನ್ನು ಬೆಳೆಸಲು ಬಡತನದ ವಿರುದ್ಧ ಹೋರಾಟ ನಡೆಸಿದ್ದಾರೆ. ನನ್ನ ತಾಯಿ ಕಾಯಿಲೆ ಬಿದ್ದದ್ದರೂ ಕೆಲಸ ಮಾಡುವುದನ್ನು ಮುಂದುವರಿಸಿದ್ದರು. ನಮಗೆ ಬಟ್ಟೆಗಳನ್ನು ಖರೀದಿಸಲು ಆಕೆ ಪ್ರತಿ ಪೈಸೆಯನ್ನೂ ಉಳಿತಾಯ ಮಾಡುತ್ತಿದ್ದಳು. ದೇಶದಲ್ಲಿ ಅಂತಹ ಕೋಟ್ಯಂತರ ತಾಯಂದಿರಿದ್ದಾರೆ. ತಾಯಿಯ ಸ್ಥಾನವು ದೇವರು ಹಾಗೂ ದೇವತೆಯರಿಗಿಂತ ಉನ್ನತ ಸ್ಥಾನ ಹೊಂದಿದೆ” ಎಂದು ಹೇಳಿದರು.
“ರಾಜವಂಶದಲ್ಲಿ ಜನಿಸುವ ರಾಜಕುಮಾರರಿಗೆ ಸೌಲಭ್ಯ ವಂಚಿತ ತಾಯಿ ಹಾಗೂ ಆಕೆಯ ಮಕ್ಕಳ ಹೋರಾಟಗಳು ಅರ್ಥವಾಗಲು ಸಾಧ್ಯವಿಲ್ಲ. ಈ ಜನರು ಚಿನ್ನ ಹಾಗೂ ಬೆಳ್ಳಿಯ ತಟ್ಟೆಯಲ್ಲಿ ಜನಿಸಿದ್ದಾರೆ. ಆದರೆ, ನೀವು ಸೌಲಭ್ಯವಂಚಿತ ತಾಯಿಯ ಮಗನನ್ನು ಆಶೀರ್ವದಿಸಿದಿರಿ ಹಾಗೂ ಆತನನ್ನು ಪ್ರಧಾನ ಸೇವಕನನ್ನಾಗಿಸಿದಿರಿ. ಇದನ್ನು ನಾಮಧಾರಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.
ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ವೇದಿಕೆಯ ಮೇಲೆ ಹತ್ತಿದ್ದ ಕೆಲವು ಯುವಕರ ಗುಂಪು, ಕೈಯಲ್ಲಿ ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಪ್ರಧಾನಿಯ ವಿರುದ್ಧ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿದ್ದರು. ಆ ವೇದಿಕೆಯ ಬಳಿಯೇ ಹಲವಾರು ಕಾಂಗ್ರೆಸ್ ಬೆಂಬಲಿಗರು ತಮ್ಮ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ನಿಂತಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಘಟನೆಯನ್ನು ಖಂಡಿಸಿದ್ದ ಬಿಜೆಪಿ, ಇದು ಕೀಳು ರಾಜಕೀಯದ ಹೊಸ ಹಂತ ಎಂದು ಆಕ್ರೋಶ ವ್ತಕ್ತಪಡಿಸಿತ್ತು. ಆದರೆ, ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪವನ್ ಖೇರಾ, ಕಾರ್ಯಕ್ರಮಕ್ಕೆ ನುಸುಳಿದ್ದ ಬಿಜೆಪಿ ಏಜೆಂಟರು, ರಾಜಕೀಯ ವಿವಾದ ಸೃಷ್ಟಿಸಲು ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದರು. ಅವರು ನಮ್ಮ ಯಾತ್ರೆಯಿಂದ ಹತಾಶರಾಗಿದ್ದರು. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.