×
Ad

ಮಹಾರಾಷ್ಟ್ರ ಚುನಾವಣಾ ದತ್ತಾಂಶಗಳನ್ನು ತಿರುಚಿ ಪ್ರಕಟಿಸಿದ ಆರೋಪ | ಐ ಸಿ ಎಸ್‌ ಎಸ್‌ ಆರ್‌ ನಿಂದ ಸಿ ಎಸ್‌ ಡಿ ಎಸ್‌ ಗೆ ಶೋಕಾಸ್ ನೋಟಿಸ್

Update: 2025-08-20 20:32 IST

ICSSR logo.Credit: ICSSR

ಹೊಸದಿಲ್ಲಿ,ಆ.20: 2024ರ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಮಹಾರಾಷ್ಟ್ರದ ಎರಡು ಅಸೆಂಬ್ಲಿ ಕ್ಷೇತ್ರಗಳ ಮತದಾನ ಮಾದರಿಯನ್ನು ತುಲನಾತ್ಮಕವಾಗಿ ಪ್ರಸ್ತುತ ಪಡಿಸುವಾಗ ದತ್ತಾಂಶಗಳನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್)ಕ್ಕೆ ಭಾರತೀಯ ಸಮಾಜವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್)ಯು ಬುಧವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ‘ವೋಟ್ ಚೋರಿ’ (ಮತಗಳವು)ವಿರುದ್ಧ ಅಭಿಯಾನ ಆರಂಭಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

‘‘ಸಿ ಎಸ್‌ ಡಿ ಎಸ್‌ ನಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಚುನಾವಣೆಗಳ ಕುರಿತ ದತ್ತಾಂಶ ವಿಶ್ಲೇಷಣೆಯಲ್ಲಿ ಲೋಪಗಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಬಳಿಕ ಆ ಹೇಳಿಕೆಯನ್ನು ಅವರು ಹಿಂತೆಗೆದುಕೊಳ್ಳಬೇಕಾಯಿತು. ಅಲ್ಲದೆ ಭಾರತದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಪಕ್ಷಪಾತದಿಂದ ಕೂಡಿದ ಮಾಧ್ಯಮ ವರದಿಗಳನ್ನು ಕೂಡಾ ಸಿ ಎಸ್‌ ಡಿ ಎಸ್ ಪ್ರಕಟಿಸಿತ್ತು ’’ ಎಂದು ಐ ಸಿ ಎಸ್‌ಎಸ್‌ ಆರ್ ಹೇಳಿಕೆ ತಿಳಿಸಿದೆ.

ಭಾರತೀಯ ಚುನಾವಣಾ ಆಯೋಗವನ್ನು ಅತ್ಯುನ್ನತ ಗೌರವವನ್ನು ಐಸಿಎಸ್‌ಎಸ್‌ಆರ್ ಹೊಂದಿದೆ. ಸಿಎಸ್‌ಡಿಎಸ್ ದತ್ತಾಂಶ ದುರ್ಬಳಕೆ ಮಾಡಿರುವುದನ್ನು ತಾನು ಗಂಭೀರವಾಗಿ ಪರಿಗಣಿಸಿದ್ದೇನೆ ಹಾಗೂ ಚುನಾವಣಾಆಯೋಗದ ಪಾವಿತ್ರ್ಯತೆಯನ್ನು ದುರ್ಬಲಗೊಳಿಸುವ ದುರುದ್ದೇಶದಿಂದ ವ್ಯಾಖ್ಯಾನವೊಂದನ್ನು ಸೃಷ್ಟಿಸುವ ಯತ್ನ ನಡೆದಿದೆ. ನೆರವು ಅನುದಾನದ ನಿಯಮಗಳನ್ನು ಸಿಎಸ್‌ಡಿಎಸ್ ಘೋರವಾಗಿ ಉಲ್ಲಂಘಿಸಿದೆ. ಈ ಬಗ್ಗೆ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಐಸಿಎಸ್‌ಎಸ್‌ಆರ್ ಗಮನಸೆಳೆದಿದೆ.

ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ಮತದಾರಪಟ್ಟಿಗಳಲ್ಲಿ ವ್ಯಾಪಕ ಲೋಪದೋಷಗಳಿರುವುದಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ರೇಖಾಂಶಗಳ ನಕ್ಷೆಯೊಂದನ್ನು ಆಗಸ್ಟ್ 18ರಂದು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪ್ರಕಟಿಸಿದ ಬಳಿಕ ವಿವಾದ ಭುಗಿಲೆದ್ದಿತ್ತು.

ಮಹಾರಾಷ್ಟ್ರದ ರಾಮ್‌ಟೇಕ್ ಹಾಗೂ ದಿಯೊಲಾಲಿ ವಿಧಾನಸಭಾ ಕ್ಷೇತ್ರಗಳು ಕೇವಲ ಆರು ತಿಂಗಳುಗಳ ಅವಧಿಯಲ್ಲಿ ಶೇ.40ರಷು ಮತದಾರರನ್ನು ಕಳೆದುಕೊಂಡಿದ್ದವು. ಹಾಗೆಯೇ ನಾಶಿಕ್ ಪಶ್ಚಿಮ ಹಾಗೂ ಹಿಂಗಾನ ಕ್ಷೇತ್ರಗಳ ಮತದಾರ ಸಂಖ್ಯೆಯಲ್ಲಿ ಶೇ.43ರಿಂದ ಶೇ.47ರಷ್ಟು ಹೆಚ್ಚಳವಾಗಿತ್ತು ಎಂದು ಖೇರಾ ಅವರು ಲೋಕನೀತಿ-ಸಿಎಸ್‌ಡಿಎಸ್ ದತ್ತಾಂಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ಸಿಎಸ್‌ಡಿಎಸ್‌ನಿಂದ ದತ್ತಾಂಶ ಬಿಡುಗಡೆ ವಿವಾದಕ್ಕೆ ಸಂಬಂಧಿಸಿ ಮಾಡಿದ ಟ್ವೀಟ್‌ಗಾಗಿ ಸಿಎಸ್‌ಡಿಎಸ್‌ನ ಸಂಶೋಧನಾ ಘಟಕವಾದ ಲೋಕ ನೀತಿಯ ಸಹ ನಿರ್ದೇಶಕ ಪ್ರೊ.ಸಂಜಯ್ ಕುಮಾರ್ ವಿಷಾದಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಹಾಗೂ 2024ರ ವಿಧಾನಸಭಾ ಚುನಾವಣೆಗಳ ನಡುವಿನ ದತ್ತಾಂಶವನ್ನು ಹೋಲಿಸುವಾಗ ತಪ್ಪುಗಳಾಗಿವೆ. ಆ ಕುರಿತ ಟ್ವೀಟ್ ಅನ್ನು ಈಗ ಅಳಿಸಿಹಾಕಲಾಗಿದೆ. ಚುನಾವಣಾ ಆಯೋಗವನ್ನು ಪ್ರಶ್ನಿಸಲು ಹಲವಾರು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷ ನಾಯಕರು ಸಂಜಯ್‌ಕುಮಾರ್ ಉಲ್ಲೇಖಿಸಿರುವ ದತ್ತಾಂಶಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಚುನಾವಣಾ ಆಯೋಗ ತಿಳಿಸಿದೆ.

1969ರಲ್ಲಿ ಸ್ಥಾಪನೆಯಾದ ಐಸಿಎಸ್‌ಎಸ್‌ಆರ್ ಸಂಸ್ಥೆಯು ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಸಾಮಾಜಿಕ ಹಾಗೂ ಮಾನವ ವಿಜ್ಞಾನ ಕುರಿತ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ ಮತ್ತು ಸಿಎಸ್‌ಡಿಎಸ್‌ಗೆ ಅದು ಆರ್ಥಿಕ ನೆರವನ್ನು ಒದಗಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News