ಬಿಹಾರ ವಿಧಾನಸಭಾ ಚುನಾವಣೆ | ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ ಸಾಧ್ಯತೆ
PC: x.com/IndianTechGuide
ಪಾಟ್ನಾ: ಬಿಹಾರದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಒಕ್ಕೂಟದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಪ್ರಸಾದ್ ಯಾದವ್ ಅವರನ್ನು ಘೋಷಿಸುವ ಸಾಧ್ಯತೆಯಿದೆ.
ತೇಜಸ್ವಿ ಯಾದವ್ ಅವರು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ)ದ ನಾಯಕರಾಗಿದ್ದು, ಬಿಹಾರದ ಮಾಜಿ ಉಪಮುಖ್ಯಮಂತ್ರಿಯೂ ಆಗಿದ್ದಾರೆ.
ಬುಧವಾರ ಕಾಂಗ್ರೆಸ್ ನ ಅಶೋಕ್ ಗೆಹ್ಲೋಟ್, ಕೃಷ್ಣ ಅಲ್ಲಾವರು, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರ ನಡುವೆ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದ್ದು, ತೇಜಸ್ವಿಯವರ ಹೆಸರೇ ಅಂತಿಮ ಪಟ್ಟಿಯ ಮುಂಚೂಣಿಯಲ್ಲಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.
ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅಶೋಕ್ ಗೆಹ್ಲೋಟ್ ಅವರು, “ಗುರುವಾರ ನಡೆಯಲಿರುವ ಮೈತ್ರಿಕೂಟದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಗೊಂದಲಗಳು ನಿವಾರಣೆಯಾಗಲಿವೆ. ಇಂಡಿಯಾ ಮೈತ್ರಿಕೂಟದಲ್ಲಿ ಸಮನ್ವಯ ಉತ್ತಮವಾಗಿದೆ ಹಾಗೂ ಮೈತ್ರಿ ಬಲವಾಗಿ ನಿಂತಿದೆ,” ಎಂದು ತಿಳಿಸಿದ್ದಾರೆ.
ಸಿಪಿಐ(ಎಂಎಲ್) (ಲಿಬರೇಷನ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರು, “ತೇಜಸ್ವಿ ಯಾದವ್ ವಿರೋಧ ಪಕ್ಷಗಳ ಸಹಜ ಮತ್ತು ಸ್ಪಷ್ಟ ಆಯ್ಕೆ. ಅವರ ಹೆಸರನ್ನು ಅಧಿಕೃತವಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸುವ ಸಾಧ್ಯತೆ ಇದೆ,” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಇನ್ನೂ ಅಧಿಕೃತ ನಿಲುವು ಪ್ರಕಟವಾಗದಿದ್ದರೂ, ಬಿಹಾರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಅವರು, “ಇಂಡಿಯಾ ಒಕ್ಕೂಟಕ್ಕೆ ಬಹುಮತ ದೊರೆತರೆ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಬುಧವಾರ ಅಶೋಕ್ ಗೆಹ್ಲೋಟ್ ಮತ್ತು ಕೃಷ್ಣ ಅಲ್ಲಾವರು ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಉಂಟಾದ ‘ಸ್ನೇಹಪರ ಸ್ಪರ್ಧೆ’ ಕುರಿತ ವಿವಾದಗಳನ್ನು ಬಗೆಹರಿಸಿದ್ದಾರೆ ಎನ್ನಲಾಗಿದೆ.