×
Ad

ಭಾರತದ ಆರೋಗ್ಯ ಕ್ಷೇತ್ರಕ್ಕೆ ಬೇಕು 'ಗೋಲ್ಡನ್ ಅವರ್': ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು

ಬಿಕ್ಕಟ್ಟಿನ ಅಂಚಿಗೆ ತಲುಪಿದ ಆರೋಗ್ಯ ವ್ಯವಸ್ಥೆ

Update: 2025-08-23 18:42 IST

  ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಆ.23: ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್‌ ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು (ಎನ್‌ಸಿಡಿಗಳು) ಸಾಂಕ್ರಾಮಿಕದ ರೀತಿಯಲ್ಲಿ ಹೆಚ್ಚುತ್ತಿದ್ದು, ಭಾರತವು ಆರೋಗ್ಯ ಬಿಕ್ಕಟ್ಟಿನ ಅಂಚಿನಲ್ಲಿದೆ ಎಂದು ಪದ್ಮ ಪುರಸ್ಕೃತ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಫೆಸಿಪಿಕ್ ಒನ್‌ ಹೆಲ್ತ್ ಇತ್ತೀಚಿಗೆ ಆಯೋಜಿಸಿದ್ದ ಸಮಾವೇಶದಲ್ಲಿ ಈ ವೈದ್ಯರು ತಕ್ಷಣ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಭಾರತವು ಈ ಎನ್‌ಸಿಡಿ ಸಾಂಕ್ರಾಮಿಕದ ಪಿಡುಗಿಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕ ಆರೋಗ್ಯ ರಕ್ಷಣೆ ಲಭ್ಯತೆ ಮತ್ತು ನೈತಿಕ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಿದ ದಿಲ್ಲಿಯ ಸರ್ ಗಂಗಾರಾಮ ಆಸ್ಪತ್ರೆಯ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಪದ್ಮಶ್ರೀ ಡಾ.ಸಿ.ಎಸ್.ರಾಣಾ ಅವರು,‘ನಮ್ಮ ಅಂತಿಮ ಗುರಿ ಸಾರ್ವಜನಿಕ ಆರೋಗ್ಯ ರಕ್ಷಣೆಯಾಗಿರಬೇಕು. ಭಾರತವು ಮುಂದುವರಿದಿದ್ದರೂ ಅಸಮಾನತೆಗಳೂ ಮುಂದುವರಿದಿವೆ. ಆರೋಗ್ಯ ರಕ್ಷಣೆಯನ್ನು ಸಮಾನವಾಗಿಸಲು ನಮಗೆ ಬಲವಾದ ನೈತಿಕ ಪರಿಪಾಠಗಳು ಮತ್ತು ವಿಶೇಷವಾಗಿ ಔಷಧಿಗಳ ಬೆಲೆ ನಿಗದಿ ಮತ್ತು ಆಸ್ಪತ್ರೆಗಳ ವೆಚ್ಚಗಳಲ್ಲಿ ನಿಯಂತ್ರಕ ಧೈರ್ಯದ ಅಗತ್ಯವಿದೆ ’ಎಂದು ಹೇಳಿದರು.

ಹೆಚ್ಚುತ್ತಿರುವ ಹೃದಯ ಕಾಯಿಲೆಗಳ ಕುರಿತಂತೆ ಮೇದಾಂತ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಧ್ಯಕ್ಷ ಪದ್ಮಶ್ರೀ ಡಾ.ಪ್ರವೀಣ್ ಚಂದ್ರ ಅವರು, ಹೃದಯವು ಹಲವಾರು ರೋಗಗಳಿಗೆ ಹೆಬ್ಬಾಗಿಲಾಗಿದೆ. ಗೋಲ್ಡನ್ ಅವರ್ ಅಥವಾ ಸುವರ್ಣ ಗಂಟೆಯೊಳಗೆ ತುರ್ತು ಆ್ಯಂಜಿಯೋಪ್ಲಾಸ್ಟಿಯು ಬಹಳಷ್ಟು ಜೀವಗಳನ್ನು ಉಳಿಸಬಲ್ಲದು ಮತ್ತು ಈಗ ಸುಧಾರಿತ ಹೃದಯ ಚಿಕಿತ್ಸೆಗಳು 80-90ರ ಪ್ರಾಯದ ರೋಗಿಗಳಿಗೂ ಲಭ್ಯವಿವೆ ಎಂದು ಹೇಳಿದರು.

ಮಧುಮೇಹ ರೋಗ ಹೆಚ್ಚುತ್ತಿರುವ ಬಗ್ಗೆ ಅಂತಃಸ್ರಾವಶಾಸ್ತ್ರಜ್ಞ ಹಾಗೂ ಮಧುಮೇಹ ತಜ್ಞ ಪದ್ಮಶ್ರೀ ಡಾ.ಅನೂಪ ಮಿಶ್ರಾ ಅವರು ಕಳವಳಗಳನ್ನು ವ್ಯಕ್ತಪಡಿಸಿದರು.

ದಿಲ್ಲಿಯ ಪ್ರತಿ ಮೂವರು ನಿವಾಸಿಗಳಲ್ಲಿ ಓರ್ವರು ಮಧುಮೇಹಿಯಾಗಿದ್ದು, ಶೇ.30 ಜನರು ಮಧುಮೇಹದ ಅಂಚಿಗೆ ತಲುಪುವ ಸ್ಥಿತಿಯಲ್ಲಿದ್ದಾರೆ. ಇದು ಹೆಮ್ಮೆ ಪಡುವ ವಿಷಯವಲ್ಲ. ತಡೆಗಟ್ಟುವಿಕೆ ಮತ್ತು ಆರಂಭಿಕ ನಿಯಂತ್ರಣ ಮುಖ್ಯವಾಗಿವೆ. ಒಝೆಂಪಿಕ್‌ ನಂತಹ ಔಷಧಿಗಳು ಭರವಸೆಯನ್ನು ಮೂಡಿಸಬಹುದು,ಆದರೆ ಜೀವನಶೈಲಿ ಮತ್ತು ಜಾಗ್ರತಿ ಮಧುಮೇಹವನ್ನು ತಡೆಯುವಲ್ಲಿ ಮುಖ್ಯವಾಗಿವೆ ಎಂದು ಫೋರ್ಟಿಸ್ ಸಿ-ಡಾಕ್ ಹಾಸ್ಪಿಟಲ್ ಫಾರ್ ಡಯಾಬಿಟಿಸ್ ಆ್ಯಂಡ್ ಅಲೈಡ್ ಸೈನ್ಸಸ್‌ ನ ಅಧ್ಯಕ್ಷರಾಗಿರುವ ಡಾ.ಮಿಶ್ರಾ ಹೇಳಿದರು.

ನಂಬಿಕೆ ಆಧಾರಿತ ಆರೈಕೆಯ ಮಹತ್ವವನ್ನು ಒತ್ತಿ ಹೇಳಿದ ಸರ್ ಗಂಗಾರಾಮ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಮಾಲೋಚಕ ಡಾ.ಮೊಹ್ಸಿನ್ ವಲಿ ಅವರು ತನ್ನದೇ ಆಸ್ಪತ್ರೆಯ ಲಾಭರಹಿತ ಮಾದರಿಯನ್ನು ಉಲ್ಲೇಖಿಸಿ,‘ಇಂತಹ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಎನ್‌ ಸಿ ಡಿಗಳ ಹೆಚ್ಚುತ್ತಿರುವ ಹೊರೆಯನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಮತ್ತು ಆರೋಗ್ಯಕರ ಭಾರತದತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದು’ ಎಂದು ಹೇಳಿದರು.

ಭಾರತವು ವೈದ್ಯಕೀಯ ತಂತ್ರಜ್ಞಾನ ಮತ್ತು ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ ಜೀವನಶೈಲಿ ರೋಗಗಳ ಅನಿಯಂತ್ರಿತ ಏರಿಕೆ ಮತ್ತು ತಡೆಗಟ್ಟಬಹುದಾದ ತಪಾಸಣೆಯ ಕೊರತೆಯು ಅದನ್ನು ಆರೋಗ್ಯ ತುರ್ತುಪರಿಸ್ಥಿತಿಯತ್ತ ತಳ್ಳುತ್ತಿದೆ ಎಂದು ಈ ತಜ್ಞ ವೈದ್ಯರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News