A320 ವರ್ಗದ 323 ವಿಮಾನಗಳಿಗೆ ಸಾಫ್ಟ್ವೇರ್ ನವೀಕರಣ ಪೂರ್ಣಗೊಳಿಸಿದ ಭಾರತೀಯ ವಿಮಾನಯಾನಗಳು
IANS File Photo
ಹೊಸದಿಲ್ಲಿ,ನ.30: ಹಾರಾಟ ನಿಯಂತ್ರಣಕ್ಕೆ ಸಂಬಂಧಿಸಿದ ಸಂಭಾವ್ಯ ಸಮಸ್ಯೆಯನ್ನು ಬಗೆಹರಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯಲ್ಲಿರುವ ಏರ್ಬಸ್ A320 ವರ್ಗದ 323 ವಿಮಾನಗಳ ಸಾಫ್ಟ್ವೇರ್ ನವೀಕರಣಗಳನ್ನು ಪೂರ್ಣಗೊಳಿಸಿವೆ ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ರವಿವಾರ ತಿಳಿಸಿದೆ.
ತೀವ್ರ ಸೌರ ವಿಕಿರಣವು ಗಮನಾರ್ಹ ಸಂಖ್ಯೆಯ A320 ವಿಮಾನಗಳಲ್ಲಿ ಹಾರಾಟ ನಿಯಂತ್ರಣಗಳ ಕಾರ್ಯ ನಿರ್ವಹಣೆಗೆ ನಿರ್ಣಾಯಕವಾದ ಡೇಟಾವನ್ನು ದೋಷಯುಕ್ತಗೊಳಿಸಬಹುದು ಮತ್ತು ಕಾರ್ಯಾಚರಣೆಗಳಿಗೆ ವ್ಯತ್ಯಯಗಳಿಗೆ ಕಾರಣವಾಬಲ್ಲ ಸಮಸ್ಯೆಯನ್ನು ಬಗೆಹರಿಸಲು ಸಾಫ್ಟ್ವೇರ್ ಬದಲಾವಣೆಗಳು ಅಗತ್ಯ ಎಂದು ಏರ್ಬಸ್ ಕಂಪನಿಯು ಶುಕ್ರವಾರ ತಿಳಿಸಿತ್ತು.
ಸಾಫ್ಟ್ವೇರ್ ನವೀಕರಣಕ್ಕಾಗಿ ಆರಂಭದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಏರ್ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಹೊಂದಿರುವ ಒಟ್ಟು 338 A320 ವಿಮಾನಗಳನ್ನು ಗುರುತಿಸಲಾಗಿತ್ತು.
ಈ ಪೈಕಿ 323 ವಿಮಾನಗಳು ಕಾರ್ಯಾಚರಣೆಯಲ್ಲಿದ್ದರೆ ಆರು ವಿಮಾನಗಳು ಸಮಗ್ರ ತಪಾಸಣೆಯಡಿ ಇವೆ. ಏರ್ ಇಂಡಿಯಾದ ಬಳಿಯಿರುವ ವಿಮಾನಗಳ ಪೈಕಿ ಒಂಭತ್ತು ವಿಮಾನಗಳಿಗೆ ಸಾಫ್ಟ್ವೇರ್ ನವೀಕರಣದ ಅಗತ್ಯವಿಲ್ಲ ಎಂದು ನಂತರ ದೃಢಪಟ್ಟಿತ್ತು ಎಂದು ಹಿರಿಯ ಡಿಜಿಸಿಎ ಅಧಿಕಾರಿಯೋರ್ವರು ತಿಳಿಸಿದರು.
ಇಂಡಿಗೋ ಕಾರ್ಯಾಚರಣೆಯಲ್ಲಿರುವ ತನ್ನ ಎಲ್ಲ 200 A320 ವಿಮಾನಗಳ ಸಾಫ್ಟ್ವೇರ್ ನವೀಕರಣವನ್ನು ಪೂರ್ಣಗೊಳಿಸಿದೆ.
ಏರ್ ಇಂಡಿಯಾ 113 ವಿಮಾನಗಳನ್ನು ಹೊಂದಿದ್ದು,ಈ ಪೈಕಿ ಕಾರ್ಯಾಚರಣೆಯಲ್ಲಿರುವ 100 ವಿಮಾನಗಳಿಗೆ ಸಾಫ್ಟ್ವೇರ್ ನವೀಕರಣವನ್ನು ಮಾಡಲಾಗಿದೆ. ನಾಲ್ಕು ವಿಮಾನಗಳು ಸಮಗ್ರ ತಪಾಸಣೆಯಲ್ಲಿವೆ ಮತ್ತು ಒಂಭತ್ತು ವಿಮಾನಗಳಿಗೆ ಯಾವುದೇ ಮಾರ್ಪಾಟಿನ ಅಗತ್ಯವಿಲ್ಲ ಎಂದು ಅಧಿಕಾರಿ ತಿಳಿಸಿದರು.
ಏರ್ ಇಂಡಿಯಾ ಎಕ್ಸ್ಪ್ರೆಸ್ ನ 23 A320 ವಿಮಾನಗಳ ಸಾಫ್ಟ್ವೇರ್ ನವೀಕರಣ ಪೂರ್ಣಗೊಂಡಿದ್ದು, ಇಂತಹ ಎರಡು ವಿಮಾನಗಳು ಮರು ವಿತರಣೆಗಾಗಿ ನಿರ್ವಹಣೆಯಲ್ಲಿವೆ.
ಬಾಧಿತ ವಿಮಾನಗಳಲ್ಲಿಯ ಎಲಿವೇಟರ್ ಆ್ಯಂಡ್ ಏಲರಾನ್ ಕಂಪ್ಯೂಟರ್ ಅಥವಾ ಇಎಲ್ಎಸಿ ಎಂದು ಕರೆಯಲ್ಪಡುವ ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ಬದಲಿಸುವಂತೆ ಅಥವಾ ಮಾರ್ಪಡಿಸುವಂತೆ ಏರ್ಬಸ್ ವಿಶ್ವಾದ್ಯಂತ ವಾಯುಯಾನ ಸಂಸ್ಥೆಗಳಿಗೆ ಸೂಚಿಸಿತ್ತು.
ಯುರೋಪಿಯನ್ ಯೂನಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿಯು (ಇಎಎಸ್ಎ) ವಿಮಾನಗಳು ಮುಂದಿನ ಹಾರಾಟವನ್ನು ನಡೆಸುವ ಮುನ್ನ ದೋಷವನ್ನು ನಿವಾರಿಸುವುದನ್ನು ಅಥವಾ ಸಾಫ್ಟ್ವೇರ್ನ್ನು ಮೇಲ್ದರ್ಜೆಗೇರಿಸುವುದನ್ನು ಕಡ್ಡಾಯಗೊಳಿಸಿ ಶುಕ್ರವಾರ ತಡರಾತ್ರಿ ತುರ್ತು ನಿರ್ದೇಶವನ್ನು ಹೊರಡಿಸಿತ್ತು.