×
Ad

ಜಿಬೌಟಿ ಕರಾವಳಿಯಲ್ಲಿ ಬೆಂಕಿ ಅವಘಡ: ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಕಾಂಡ್ ನಿಂದ ರಕ್ಷಣಾ ಕಾರ್ಯಾಚರಣೆ

Update: 2025-10-23 11:13 IST

Photo credit: X/@indiannavy 

ಜಿಬೌಟಿ: ಜಿಬೌಟಿ ಕರಾವಳಿಯ ಬಳಿ ಸಂಚರಿಸುತ್ತಿದ್ದ ಕ್ಯಾಮರೂನ್ ದೇಶಕ್ಕೆ ಸೇರಿದ ವಾಣಿಜ್ಯ ಹಡಗು ಎಂಟಿ ಫಾಲ್ಕನ್ ಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಕಾಂಡ್ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ.

ನೌಕೆಯು ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಡೆಸಿ ಜೀವ ರಕ್ಷಣೆ ಮತ್ತು ಅವಶೇಷಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದೆ. ಈ ದುರಂತದಲ್ಲಿ ಇಬ್ಬರು ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ

ಎಂಟಿ ಫಾಲ್ಕನ್ ಹಡಗಿನಲ್ಲಿ ಒಟ್ಟು 26 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 25 ಮಂದಿ ಭಾರತೀಯರು ಹಾಗೂ ಒಬ್ಬರು ಬ್ರಿಟಿಷ್ ಪ್ರಜೆ. ಬೆಂಕಿ ಕಾಣಿಸಿಕೊಂಡ ಬಳಿಕ ಸುತ್ತಮುತ್ತಲಿನ ಮರ್ಚಂಟ್ ಹಡಗುಗಳು ತಕ್ಷಣ ಸ್ಪಂದಿಸಿ 24 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ ಎಂದು ಭಾರತೀಯ ನೌಕಾಪಡೆಯ ಪ್ರಕಟನೆ ತಿಳಿಸಿದೆ.

ಏಡೆನ್ ಕೊಲ್ಲಿಯಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದ್ದ ಐಎನ್ಎಸ್ ತ್ರಿಕಾಂಡ್ ಘಟನಾ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿ, ವೈದ್ಯಕೀಯ ನೆರವು ಒದಗಿಸಿತು. ತೀವ್ರ ಶಾಖ, ಹಾನಿಗೊಂಡ ಹಡಗಿನ ಭಾಗಗಳು ಹಾಗೂ ವಿಷಕಾರಿ ಹೊಗೆಯ ನಡುವೆ, ನೌಕಾಪಡೆಯ ಅಗ್ನಿಶಾಮಕ ಮತ್ತು ವೈದ್ಯಕೀಯ ತಜ್ಞರ ತಂಡವು ಕಾಣೆಯಾಗಿದ್ದ ಇಬ್ಬರು ಸಿಬ್ಬಂದಿಯ ಮೃತದೇಹಗಳನ್ನು ಪತ್ತೆಹಚ್ಚಿತು.

“ಹಡಗಿನಿಂದ ಹೊರಬರಲು ಸಾಧ್ಯವಾದ 26 ಮಂದಿಯಲ್ಲಿ 24 ಮಂದಿಯನ್ನು ಮರ್ಚೆಂಟ್ ಹಡಗುಗಳು ರಕ್ಷಿಸಿವೆ. ಐಎನ್ಎಸ್ ತ್ರಿಕಾಂಡ್‌ನ ತಂಡವು ತೀವ್ರ ಪರಿಸ್ಥಿತಿಗಳಲ್ಲಿಯೂ ಕಾಣೆಯಾದ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ,” ಎಂದು ನೌಕಾಪಡೆಯು ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

ನಂತರ ಮೃತದೇಹಗಳನ್ನು ಜಿಬೌಟಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ನೌಕಾಪಡೆಯು ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News