×
Ad

"ನೀನು ವಿಮಾನ ಹಾರಿಸಲು ಯೋಗ್ಯನಲ್ಲ, ವಾಪಸ್ ಹೋಗಿ ಚಪ್ಪಲಿಗಳನ್ನು ಹೊಲಿ": ಇಂಡಿಗೋದ ದಲಿತ ತರಬೇತಿ ಪೈಲಟ್‌ಗೆ ಹಿರಿಯ ಸಹೋದ್ಯೋಗಿಗಳ ಕಿರುಕುಳ!

Update: 2025-06-23 14:21 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: "ನೀನು ವಿಮಾನವನ್ನು ಹಾರಿಸಲು ಯೋಗ್ಯನಲ್ಲ ಮತ್ತು ಚಪ್ಪಲಿಗಳನ್ನು ಹೊಲಿಯಬೇಕು" ಎಂದು ನಿಂದಿಸುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 35ರ ಹರೆಯದ ದಲಿತ ಪೈಲಟ್ ಓರ್ವರು ಆರೋಪಿಸಿದ್ದಾರೆ.

ಅವರ ದೂರಿನ ಆಧಾರದಲ್ಲಿ ಪೋಲಿಸರು ಇಂಡಿಗೋ ಅಧಿಕಾರಿಗಳಾದ ತಪಸ್ ಡೇ,ಮನೀಷ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸುದ್ದಿಸಂಸ್ಥೆಯ ವರದಿಯಂತೆ,‌ ದೂರುದಾರರು ಮೊದಲು ಬೆಂಗಳೂರು ಪೋಲಿಸರನ್ನು ಸಂಪರ್ಕಿಸಿದ್ದರು. ಅಲ್ಲಿಯ ಪೋಲಿಸರು ಅಪರಾಧ ಎಲ್ಲೇ ನಡೆದಿದ್ದರೂ ಯಾವುದೇ ಪೋಲಿಸ್ ಠಾಣೆಯಲ್ಲಿ ಸಲ್ಲಿಸಬಹುದಾದ ಝೀರೋ ಎಫ್‌ಐಆರ್‌ನ್ನು ದಾಖಲಿಸಿಕೊಂಡಿದ್ದು,ಅದನ್ನೀಗ ಇಂಡಿಗೋದ ಮುಖ್ಯ ಕಚೇರಿಯಿರುವ ಗುರುಗ್ರಾಮಕ್ಕೆ ವರ್ಗಾಯಿಸಲಾಗಿದೆ.

ಎ.28ರಂದು ಗುರುಗ್ರಾಮದ ಇಂಡಿಗೋ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಆರೋಪಿಗಳು ತನ್ನನ್ನು‘ ನೀನು ವಿಮಾನ ಹಾರಿಸಲು ಯೋಗ್ಯನಲ್ಲ,ವಾಪಸ್ ಹೋಗಿ ಚಪ್ಪಲಿಗಳನ್ನು ಹೊಲಿದುಕೊಂಡಿರು. ನೀನು ಇಲ್ಲಿ ಕಾವಲುಗಾರನಾಗಲೂ ಅರ್ಹನಲ್ಲ’ ಎಂದು ನಿಂದಿಸಿದ್ದರು ಎಂದು ದೂರುದಾರರು ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಬಲವಂತವಾಗಿ ತನ್ನ ರಾಜೀನಾಮೆಯನ್ನು ಪಡೆದುಕೊಳ್ಳುವ ಉದ್ದೇಶದಿಂದ ತನಗೆ ಕಿರುಕುಳ ನೀಡಲಾಗಿತ್ತು, ಅವಹೇಳನಕಾರಿ ಹೇಳಿಕೆಗಳು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿ ತನ್ನ ಗುರುತನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ನ್ಯಾಯಸಮ್ಮತವಲ್ಲದ ವೇತನ ಕಡಿತ, ಬಲವಂತದ ಮರುತರಬೇತಿ ಅವಧಿಗಳು ಮತ್ತು ಅನಗತ್ಯ ಎಚ್ಚರಿಕೆ ನೋಟಿಸ್‌ಗಳ ಮೂಲಕ ತಾನು ‘ವೃತ್ತಿಪರ ಬಲಿಪಶು’ವಾಗಿದ್ದೇನೆ ಎಂದು ತಿಳಿಸಿರುವ ಅವರು, ತಾನು ವಿಷಯವನ್ನು ಹಿರಿಯ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿಯ ಗಮನಕ್ಕೆ ತಂದಿದ್ದೆನಾದರೂ ಯಾವುದೇ ಕ್ರಮವನ್ನು ಕೈಗೊಳ್ಳದ್ದರಿಂದ ಪೋಲಿಸ್ ದೂರನ್ನು ಸಲ್ಲಿಸುವುದು ತನಗೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News