ಸೂರತ್ ನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಇಂಡಿಗೊ ವಿಮಾನ | PC: X
ಅಹಮದಾಬಾದ್: ಸೂರತ್ ನಿಂದ ದುಬೈಗೆ 150ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಡಿಗೊ ವಿಮಾನ (6ಇ-1507) ಮಾರ್ಗಮಧ್ಯದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಗುರುವಾರ ನಡೆದಿದೆ.
ಪೈಲಟ್ ತೋರಿದ ಕ್ಷಿಪ್ರ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದ್ದು, ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದಾರೆ. ಬಳಿಕ ಅವರನ್ನೆಲ್ಲ ಪರ್ಯಾಯ ವಿಮಾನದಲ್ಲಿ ದುಬೈಗೆ ಕಳುಹಿಸಿಕೊಡಲಾಗಿದೆ.
ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಟೇಕಾಫ್ ಆಗುತ್ತಿದ್ದಂತೆಯೇ, ವಿಮಾನದ ಒಂದು ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ದೋಷದ ಗಾಂಭೀರ್ಯವನ್ನು ಅರ್ಥ ಮಾಡಿಕೊಂಡ ಪೈಲಟ್, ಕೂಡಲೇ ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಈ ಕುರಿತು ಮಾಹಿತಿ ನೀಡಿದ್ದು, ಅತ್ಯಂತ ಸಮೀಪವಿದ್ದ ಅಹಮದಾಬಾದ್ ನ ಸರದಾರ್ ವಲ್ಲಭ ಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದನ್ನು ತಿಳಿದು ಪ್ರಯಾಣಿಕರು ಗಾಬರಿಗೊಳಗಾದರೂ, ವಿಮಾನದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಹಾಗೂ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದಾರೆ.
ತುರ್ತು ಭೂಸ್ಪರ್ಶವನ್ನು ದೃಢಪಡಿಸಿರುವ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, “ಪೈಲಟ್ ದಿಢೀರನೆ ವಿಮಾನದ ಮಾರ್ಗವನ್ನು ಬದಲಿಸಲು ನಿರ್ಧರಿಸಿದ್ದರಿಂದ, ಸೂರತ್ ನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೊ ವಿಮಾನವೊಂದು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿನ ತಾಂತ್ರಿಕ ತಂಡಗಳು ವಿಮಾನದ ವಿಸ್ತೃತ ತಪಾಸಣೆ ಕೈಗೊಂಡವು” ಎಂದು ತಿಳಿಸಿದ್ದಾರೆ.
ವಿಮಾನವು ಭೂಸ್ಪರ್ಶ ಮಾಡುತ್ತಿದ್ದಂತೆಯೇ, ಇಂಡಿಗೊ ವಿಮಾನ ಯಾನ ಸಂಸ್ಥೆಯ ಇಂಜಿನಿಯರ್ ಗಳು ಇಂಜಿನ್ ದೋಷದ ಕುರಿತು ವಿಸ್ತೃತ ತನಿಖೆ ಕೈಗೊಂಡರು. ವಿಮಾನವು ಮತ್ತೆ ಹಾರಾಟಕ್ಕೆ ಸಜ್ಜಾಗುವುದಕ್ಕೂ ಮುನ್ನ, ಎಲ್ಲ ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸುವುದಾಗಿ ಇಂಡಿಗೊ ವಿಮಾನ ಯಾನ ಸಂಸ್ಥೆ ಭರವಸೆ ನೀಡಿದೆ.