ಸತತ 6ನೇ ದಿನವೂ ವಿಮಾನ ಸಂಚಾರ ಅಸ್ತವ್ಯಸ್ತ: 650ಕ್ಕೂ ಅಧಿಕ ಯಾನ ರದ್ದು
Photo Credit: PTI
ಹೊಸದಿಲ್ಲಿ: ದೇಶಾದ್ಯಂತ ವಿಮಾನ ಸಂಚಾರ ಅವ್ಯವಸ್ಥೆಯು ಸತತ ಆರನೇ ದಿನವಾದ ರವಿವಾರವೂ ಮುಂದುವರಿದಿದೆ. ತನ್ನ ವಿಮಾನಯಾನಗಳನ್ನು ನಿಗದಿತ ವೇಳಾಪಟ್ಟಿಯಂತೆ ಏರ್ಪಡಿಸಲು ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊಗೆ ರವಿವಾರವೂ ಸಾಧ್ಯವಾಗಲಿಲ್ಲ.
ತನ್ನ ದೈನಂದಿನ 2,300 ವಿಮಾನಯಾನಗಳ ಪೈಕಿ ರವಿವಾರ 650ಕ್ಕೂ ಅಧಿಕ ಯಾನಗಳನ್ನು ರದ್ದುಪಡಿಸಲಾಗಿದೆ ಎಂದು ಇಂಡಿಗೊ ರವಿವಾರ ತಿಳಿಸಿತು.
ಡಿಸೆಂಬರ್ 10ರ ವೇಳೆಗೆ ವಿಮಾನಯಾನಗಳನ್ನು ಸಾಮಾನ್ಯ ಸ್ಥಿತಿಗೆ ತರುವ ನಿರೀಕ್ಷೆಯಿದೆ ಎಂದು ಇಂಡಿಗೊ ಹೇಳಿದೆ. ಇದಕ್ಕೂ ಮೊದಲು, ಅದು ಸಾಮಾನ್ಯ ಸ್ಥಿತಿ ಮರಳಲು ಡಿಸೆಂಬರ್ 10- 15ರ ಸಮಯ ಮಿತಿಯನ್ನು ನಿಗದಿಪಡಿಸಿತ್ತು.
ರವಿವಾರ 1,650 ವಿಮಾನಯಾನಗಳನ್ನು ಏರ್ಪಡಿಸುವುದಾಗಿ ಇಂಡಿಗೊ ಹೇಳಿತು. ಇದು ಶನಿವಾರದ ಯಾನ ಸಂಖ್ಯೆಗಿಂತ ಹಚ್ಚಾಗಿದೆ. ಶನಿವಾರದ ಅಂತ್ಯದ ವೇಳೆಗೆ ತಾನು 1,500 ವಿಮಾನಯಾನಗಳನ್ನು ಏರ್ಪಡಿಸಿರುವುದಾಗಿ ಅದು ಹೇಳಿತ್ತು. ಶನಿವಾರ ಸುಮಾರು 850 ವಿಮಾನಯಾನಗಳನ್ನು ರದ್ದುಪಡಿಸಲಾಗಿತ್ತು. ಬಿಕ್ಕಟ್ಟು ತಾರಕಕ್ಕೇರಿದ್ದ ಶುಕ್ರವಾರ 1,000ಕ್ಕೂ ಅಧಿಕ ಯಾನಗಳನ್ನು ರದ್ದುಪಡಿಸಲಾಗಿತ್ತು.
ಇಂಡಿಗೊ ರವಿವಾರ ಮುಂಬೈಯಲ್ಲಿ ಕನಿಷ್ಠ 112 ಯಾನಗಳನ್ನು ರದ್ದುಪಡಿಸಿದೆ. ದಿಲ್ಲಿಯ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊದ 109 ಯಾನಗಳು ರದ್ದಾಗಿವೆ.
‘‘ನಮ್ಮ ಸಂಪರ್ಕ ಜಾಲದಲ್ಲಿ ಮತ್ತಷ್ಟು ಗಮನಾರ್ಹ ಹಾಗೂ ಸುಸ್ಥಿರ ಸುಧಾರಣೆಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಶನಿವಾರ ತೆಗೆದುಕೊಳ್ಳಲಾಗಿತ್ತು. ಇಂದು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂದಿನ ಯಾನ ರದ್ದತಿಗಳ ಸಂಖ್ಯೆಯಲ್ಲಿ ಕಡಿತವಾಗಿದೆ ಮತ್ತು ಸಮಯಕ್ಕೆ ಸರಿಯಾದ ಯಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ’’ ಎಂದು ಇಂಡಿಗೊ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರವಿವಾರ 75 ಶೇಕಡ ಯಾನಗಳು ಸಮಯಕ್ಕೆ ಸರಿಯಾಗಿ ನಡೆದಿವೆ. ಶುಕ್ರವಾರ ಈ ಸಂಖ್ಯೆ ದಾಖಲೆಯ 8.5 ಶೇಕಡಕ್ಕೆ ಕುಸಿದಿತ್ತು.
ವಿಮಾನ ಸಂಚಾರ ವ್ಯತ್ಯಯ ಡಿಸೆಂಬರ್ 10ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಬಿಕ್ಕಟ್ಟು ನಿರ್ವಹಣಾ ಗುಂಪು ರಚಿಸಿದ ಇಂಡಿಗೊ:
ವಿಮಾನ ಸಂಚಾರದಲ್ಲಿ ಉಂಟಾಗಿರುವ ಬೃಹತ್ ಪ್ರಮಾಣದ ಅಸ್ತವ್ಯಸ್ತತೆಯನ್ನು ನಿಭಾಯಿಸಲು ಇಂಟರ್ಗ್ಲೋಬ್ ಏವಿಯೇಶನ್ ಲಿಮಿಟೆಡ್ (ಇಂಡಿಗೊ)ನ ಆಡಳಿತ ಮಂಡಳಿಯು ಬಿಕ್ಕಟ್ಟು ನಿರ್ವಹಣಾ ಗುಂಪೊಂದನ್ನು ರಚಿಸಿದೆ.
ಈ ಗುಂಪಿನಲ್ಲಿ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ, ನಿರ್ದೇಶಕರಾದ ಗ್ರೆಗ್ ಸಾರೆಸ್ಕಿ, ಮೈಕ್ ವಿಟೇಕರ್ ಮತ್ತು ಅಮಿತಾಭ್ ಕಾಂತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್ ಇದ್ದಾರೆ ಎಂದು ವಿಮಾನಯಾನ ಸಂಸ್ಥೆಯು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಗ್ರಾಹಕರು ಎದುರಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು, ವಿಮಾನ ರದ್ದತಿಗಳ ಹಿನ್ನೆಲೆಯಲ್ಲಿ ಟಿಕೆಟ್ ದರ ಮರುಪಾವತಿ ಸರಿಯಾದ ಸಮಯದಲ್ಲಿ ಆಗುವಂತೆ ನೋಡಿಕೊಳ್ಳಲು ಮತ್ತು ಪ್ರಯಾಣವನ್ನು ಮರುನಿಗದಿಪಡಿಸಲು ನಿರ್ದೇಶಕರು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ’’ ಎಂದು ಅದು ಹೇಳಿದೆ.