ಟೇಕ್-ಆಫ್ ಆಗುತ್ತಿದ್ದ ಇಂಡಿಗೋ ವಿಮಾನದ ಇಂಜಿನ್‌ನಲ್ಲಿ ಬೆಂಕಿ; `ಮೇಡೇ‘ ಘೋಷಣೆ ಬಳಿಕ ಯಾನ ರದ್ದು
PC : X
ಅಹ್ಮದಾಬಾದ್,ಜು.24: ಬುಧವಾರ ಬೆಳಿಗ್ಗೆ ಅಹ್ಮದಾಬಾದ್ ನಿಂದ ದಿಯುಗೆ ತೆರಳಲು ಟೇಕ್-ಆಫ್‌ಗೆ ಸಜ್ಜಾಗುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ಗಳಲ್ಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ಸುಮಾರು 60 ಪ್ರಯಾಣಿಕರು ಸಾವಿನ ಭೀತಿಯಿಂದ ಭಯಾನಕ ಕ್ಷಣಗಳನ್ನು ಅನುಭವಿಸುವಂತಾಗಿತ್ತು.
ಮೂಲಗಳು ತಿಳಿಸಿರುವಂತೆ ವಿಮಾನವು ಟೇಕ್-ಆಫ್ ಆಗಲು ರನ್‌ವೇದಲ್ಲಿ ಚಲಿಸುತ್ತಿದ್ದಾಗ ಪೈಲಟ್ ವಾಯು ಸಂಚಾರ ನಿಯಂತ್ರಕ(ಎಟಿಸಿ)ಕ್ಕೆ ‘ಮೇ ಡೇ,ಮೇ ಡೇ’ ಎಂಬ ಸಂದೇಶವನ್ನು ರವಾನಿಸಿದ್ದರು.ಈ ಸಂಕಷ್ಟ ಕರೆಯ ಬಳಿಕ ತಕ್ಷಣವೇ ಟೇಕ್-ಆಫ್ ನ್ನು ರದ್ದುಗೊಳಿಸಲಾಯಿತು.
ವಿಮಾನವು ಪೂರ್ವಾಹ್ನ 11 ಗಂಟೆಗೆ ಟೇಕ್-ಆಫ್ ಆಗಬೇಕಿತ್ತು. ಇಂಜಿನ್ ನಲ್ಲಿ ಬೆಂಕಿಯನ್ನು ಗಮನಿಸಿದ್ದ ಪೈಲಟ್ ಎಚ್ಚರಿಕೆಯನ್ನು ರವಾನಿಸಿದ್ದರು. ತಕ್ಷಣ ಟೇಕ್-ಆಫ್ ರದ್ದುಗೊಳಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು.
ಜೂನ್ 12ರಂದು ಅಹ್ಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 260 ಜನರು ಸಾವನ್ನಪ್ಪಿದ್ದ ದುರಂತ ಘಟನೆ ಇನ್ನೂ ಹಸಿರಾಗಿರುವಾಗಲೇ ಬುಧವಾರ ಈ ಇನ್ನೊಂದು ಅವಘಡ ಸಂಭವಿಸಿದೆ.