×
Ad

ಇರಾನ್‌ನಿಂದ ವಿದ್ಯಾರ್ಥಿಗಳು ಸಹಿತ ಹಲವು ಭಾರತೀಯರು ಸ್ವದೇಶಕ್ಕೆ ವಾಪಸ್

Update: 2026-01-17 20:50 IST

 Photo Credit : PTI 

ಹೊಸದಿಲ್ಲಿ,ಜ.17: ವ್ಯಾಪಕವಾದ ಆಡಳಿತ ವಿರೋಧಿ ಪ್ರತಿಭಟನೆಯನ್ನು ಎದುರಿಸುತ್ತಿರುವ ಇರಾನ್‌ನಿಂದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಭಾರತೀಯರು ಶುಕ್ರವಾರ ತಡರಾತ್ರಿ ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

12-13 ಮಂದಿಯ ಭಾರತೀಯರ ತಂಡದಲ್ಲಿದ್ದ ಅಲ್‌ನಕ್ವಿಯವರನ್ನು ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಸಂದರ್ಶಿಸಿದ ಪತ್ರಕರ್ತರು, ಇರಾನ್‌ನಲ್ಲಿ ಯಾವುದೇ ರೀತಿಯ ತೊಂದರೆಯನ್ನು ಎದುರಿಸಿದ್ದೀರಾ ಎಂಬ ಪ್ರಶ್ನಿಸಿದಾಗ, ತನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲವೆಂದು ತಿಳಿಸಿದರು.

‘‘ನಾವು ಟೆಹರಾನ್‌ನಿಂದ ಆಗಮಿಸಿದ್ದೇವೆ. ಇದಕ್ಕೂ ಮುನ್ನ ನಾವು ಇರಾಕ್‌ನಲ್ಲಿದ್ದು ಅಲ್ಲಿಂದ ಇರಾನ್‌ಗೆ ಪ್ರಯಾಣಿಸಿದ್ದೇವೆ. ಸುಮಾರು 8 ದಿನಗಳ ವಾಸ್ತವ್ಯದ ಆನಂತರ ನಾವು ಭಾರತಕ್ಕೆ ವಾಪಸಾಗಿದ್ದೇವೆ’’ ಎಂದವರು ಪಿಟಿಐಗೆ ತಿಳಿಸಿದ್ದಾರೆ.

ಶಿರಾಝ್‌ನ ವೈದ್ಯಕೀಯ ಕಾಲೇಜ್‌ನಲ್ಲಿ ಕಲಿಯುತ್ತಿಯುವ ವಿದ್ಯಾರ್ಥಿನಿಯೊಬ್ಬರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಅಲ್ಲಿ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತಿಲ್ಲ. ದೇಶಾದ್ಯಂತ ಏನಾಗುತ್ತಿದೆಯೆಂಬುದು ನಿಖರವಾಗಿ ಗೊತ್ತಾಗುತ್ತಿಲ್ಲವೆಂದರು.

ತಾನಿದ್ದ ಶಿರಾಝ್ ನಗರದಲ್ಲಿ ಪರಿಸ್ಥಿತಿ ಉತ್ತಮವಾಗಿತ್ತು. ತಾವೆಲ್ಲಾ ಸ್ವಂತ ಖರ್ಚಿನಲ್ಲಿ ವಾಣಿಜ್ಯ ವಿಮಾನದಲ್ಲಿ ಆಗಮಿಸಿದ್ದೇವೆಯೇ ಹೊರತು ಭಾರತ ಸರಕಾರವು ಏರ್ಪಾಡು ಮಾಡಿಲ್ಲವೆಂದು ಹೇಳಿದರು.

ಇರಾನ್‌ನಿಂದ ವಾಪಾಸಾ ತಮ್ಮ ಬಂಧುಗಳನ್ನು ಸ್ವಾಗತಿಸಲು ದಿಲ್ಲಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಭಾರೀ ಸಂಖ್ಯೆಯ ಜನರು ನೆರೆದಿದ್ದರು.

ಹಣದುಬ್ಬರ ಹಾಗೂ ಇರಾನ್ ಕರೆನ್ಸಿ ರಿಯಾಲ್‌ನ ಮೌಲ್ಯದ ಕುಸಿತದ ಬಳಿಕ ಇರಾನ್‌ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಆನಂತರ ಅದು ಆಡಳಿತ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು. ಟೆಹರಾನ್ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಯಲ್ಲಿ ಈವರೆಗೆ ಕನಿಷ್ಠ 2,500 ಮಂದಿ ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News