ಅಮೆರಿಕದ ಅಧ್ಯಕ್ಷ ಟ್ರಂಪ್ ರಿಂದ ಹತ್ಯೆಯ ಬೆದರಿಕೆಯ ನಡುವೆಯೇ 'ಯುದ್ಧದ ಪ್ರಾರಂಭ' ಎಂದ ಇರಾನ್‌ನ ಸರ್ವೋಚ್ಚ ನಾಯಕ ಖಾಮಿನೈ!
ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಹತ್ಯೆಯ ಬೆದರಿಕೆಯ ನಡುವೆಯೇ ಮೊದಲ ಹೇಳಿಕೆ ನೀಡಿರುವ ಇರಾನಿನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ, ಯುದ್ಧದ ಪ್ರಾರಂಭ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ತಮ್ಮ ಖಾತೆಯಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪರ ನಿಂತಿದ್ದಾರೆ. ಇರಾನಿನ ವಾಯು ಪ್ರದೇಶವು ಸಂಪೂರ್ಣವಾಗಿ ತನ್ನ ಹದ್ದು ಬಸ್ತಿನಲ್ಲಿದೆ. ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ಎಲ್ಲಿದ್ದಾರೆಂದು ತಿಳಿದಿದ್ದು, ಅವರ ಹತ್ಯೆಯ ಸಮಯ ಸನ್ನಿಹಿತವಾಗಿದೆ ಎಂದು ಥ್ರೆಡ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿ ಬೆದರಿಕೆ ಹಾಕಿದ್ದರು.
ಟ್ರಂಪ್ ಅವರ ಬೆದರಿಕೆಗಳ ಹೊರತಾಗಿಯೂ, ಇರಾನ್ ಇಸ್ರೇಲ್‌ನ ದಾಳಿಯ ವಿರುದ್ಧ ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಇರಾನಿನ ಸರ್ವೋಚ್ಚ ನಾಯಕ ಪುನರುಚ್ಚರಿಸಿದ್ದಾರೆ. ನಾವು ಯಹೂದಿಗಳಿಗೆ ಕರುಣೆ ತೋರಿಸುವುದಿಲ್ಲ, ಎಂದು ಅವರು ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಭಯೋತ್ಪಾದಕ ಯಹೂದಿ ಆಡಳಿತಕ್ಕೆ ನಾವು ಬಲವಾದ ಪ್ರತಿಕ್ರಿಯೆ ನೀಡಬೇಕು” ಎಂದು ಅಯತೊಲ್ಲಾ ಅಲಿ ಖಾಮಿನೈ X ನಲ್ಲಿ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.