×
Ad

ಜಾರ್ಖಂಡ್: ಹೋಳಿ ಮೆರವಣಿಗೆ ಸಂದರ್ಭ ಘರ್ಷಣೆ; ದುಷ್ಕರ್ಮಿಗಳಿಂದ ಹಲವು ವಾಹನಗಳಿಗೆ ಬೆಂಕಿ

Update: 2025-03-15 21:04 IST

PC : ANI 

ರಾಂಚಿ: ಜಾರ್ಖಂಡ್‌ನ ಗಿರಿಡಿಹ ಪ್ರದೇಶದಲ್ಲಿ ಶುಕ್ರವಾರ ಹೋಳಿ ಆಚರಣೆ ಸಂದರ್ಭ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದ ಬಳಿಕ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಗಿರಿಡಿಹದ ಘೋಥರಂಬಾ ಚೌಕದ ಸಮೀಪದ ರಸ್ತೆಯ ಮೂಲಕ ಹೋಳಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಎರಡು ಸಮುದಾಯಗಳ ನಡುವೆ ನಡೆದ ವಾಗ್ವಾದ ಘರ್ಷಣೆಗೆ ಕಾರಣವಾಗಿದ್ದು, ಇದು ಸುಮಾರು ಒಂದು ಗಂಟೆಗಳ ಕಾಲ ಮುಂದುವರಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘರ್ಷಣೆಯ ಕುರಿತು ಮಾಹಿತಿ ಸ್ವೀಕರಿಸಿದ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು ಹಾಗೂ ದುಷ್ಕರ್ಮಿಗಳನ್ನು ಚದುರಿಸುವಲ್ಲಿ ಸಫಲರಾದರು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪೊಲೀಸ್ ಅಧೀಕ್ಷಕ ಡಾ. ಬಿಮಲ್, ಹೋಳಿ ಆಚರಣೆ ಸಂದರ್ಭ ಘೋಥರಂಬಾ ಓಪಿ ಕ್ಷೇತ್ರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಭಾಗಿಯಾದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರಿಗೂ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದಿದ್ದಾರೆ.

ಈ ನಡುವೆ ಉಪ ಅಬಿವೃದ್ಧಿ ಆಯುಕ್ತೆ ಸಮಿತಾ ಕುಮಾರಿ, ‘‘ಹೋಳಿ ಆಚರಣೆ ಸಂದರ್ಭ ಕೆಲವು ಸಮಾಜ ವಿರೋಧಿ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡಲು ಪ್ರಯತ್ನಿಸಿವೆ. ಆದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ವಾಹನಗಳಿಗೆ ಬೆಂಕಿ ಹಚ್ಚಿವೆ. ಘಟನೆಗೆ ಕಾರಣವಾದ ಅಂಶಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ’’ ಎಂದಿದ್ದಾರೆ.

ಘಟನೆ ಕುರಿತಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಸರಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಜಾರ್ಖಂಡ್‌ನ ಬಿಜೆಪಿ ವರಿಷ್ಠ ಹಾಗೂ ಪ್ರತಿಪಕ್ಷದ ನಾಯಕ ಬಾಬುಲಾಲ್ ಮರಾಂಡಿ ‘ಎಕ್ಸ್’ನ ಪೋಸ್ಟ್‌ನಲ್ಲಿ ಈ ಹಿಂಸಾಚಾರಕ್ಕೆ ಹೇಮಂತ್ ಸೊರೇನ್ ಅವರ ಸರಕಾರ ಕಾರಣ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News