×
Ad

ಟುನಿಷಿಯಾದಲ್ಲಿ ಸಿಲುಕಿದ ಜಾರ್ಖಂಡ್‌ ನ ವಲಸೆ ಕಾರ್ಮಿಕರು; ಸರಕಾರ ಮಧ್ಯಪ್ರವೇಶಿಸುವಂತೆ ವೀಡಿಯೊ ಸಂದೇಶದಲ್ಲಿ ಮನವಿ

Update: 2025-10-31 21:51 IST

Photo Credit ; newindianexpress.com

ರಾಂಚಿ, ಅ. 31: ಜಾರ್ಖಂಡ್‌ ನ ಗಿರಿಡಿಹ, ಬೊಕಾರೊ ಹಾಗೂ ಹಝಾರಿಬಾಗ್ ಜಿಲ್ಲೆಗಳ 48ಕ್ಕೂ ಅಧಿಕ ವಲಸೆ ಕಾರ್ಮಿಕರು ಆಫ್ರಿಕಾದ ದೇಶ ಟುನಿಷಿಯಾದಲ್ಲಿ ಕಳೆದ ಮೂರು ತಿಂಗಳಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

ವೀಡಿಯೊ ಸಂದೇಶದ ಮೂಲಕ ಈ ಕಾರ್ಮಿಕರು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಲು ಭಾರತ ಸರಕಾರದ ನೆರವನ್ನು ಕೋರಿದ್ದಾರೆ.

ವೀಡಿಯೊ ಸಂದೇಶದಲ್ಲಿ ಕಾರ್ಮಿಕರು ತಮ್ಮ ವೇತನವನ್ನು ಕಳೆದ ಆರು ತಿಂಗಳುಗಳಿಂದ ತಡೆ ಹಿಡಿಯಲಾಗಿದೆ. ಆದುದರಿಂದ ತಮಗೆ ತಿನ್ನಲು ಆಹಾರವಿಲ್ಲದೆ, ಹಸಿವಿನಿಂದ ಬಳಲುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ತಮ್ಮನ್ನು ತ್ವರಿತವಾಗಿ ಹಿಂದೆ ಕರೆಸಿಕೊಳ್ಳುವಂತೆ ಹಾಗೂ ಬಾಕಿ ಇರುವ ವೇತನ ಪಾವತಿಸುವಂತೆ ಕ್ರಮ ಕೈಗೊಳ್ಳುವಂತೆ ಭಾರತ ಸರಕಾರದಲ್ಲಿ ಮನವಿ ಮಾಡಿದ್ದಾರೆ.

ತಾವು ಕಂಪೆನಿಯ ಉದ್ಯೋಗಿಗಳು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಟುನಿಷಿಯಾ ತಲುಪಿದ ಮೇಲೆ ತಾವು ಗುತ್ತಿಗೆ ಕಾರ್ಮಿಕರು ಎಂದು ತಿಳಿದು ಬಂತು. ಇದಲ್ಲದೆ, ದಿನದಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ ಕೆಲಸ ಎಂದು ಹೇಳಲಾಗಿತ್ತು. ಆದರೆ, ದಿನಕ್ಕೆ 12 ಗಂಟೆಗೂ ಅಧಿಕ ಕಾಲ ಕೆಲಸ ಮಾಡುವಂತೆ ಒತ್ತಾಯಿಸಲಾಯಿತು ಎಂದು ಎಂದು ವಲಸೆ ಕಾರ್ಮಿಕರು ಹೇಳಿದ್ದಾರೆ.

ತಾವು ವಿರೋಧಿಸಿದಾಗ, ನಮ್ಮನ್ನು ಜೈಲಿನಲ್ಲಿ ಹಾಕಲಾಗುವುದು ಹಾಗೂ ಸ್ವದೇಶಕ್ಕೆ ಎಂದಿಗೂ ಹಿಂದಿರುಗಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರು ಎಂದು ವಲಸೆ ಕಾರ್ಮಿಕರಲ್ಲಿ ಓರ್ವರಾದ ಅಮರ್‌ದೀಪ್ ಚೌಧರಿ ತಿಳಿಸಿದ್ದಾರೆ.

‘‘ನಾವು ಈಗ ಹೇಗಾದರೂ ಮನೆಗೆ ಹಿಂದಿರುಗಲು ಬಯಸಿದ್ದೇವೆ. ಆದರೆ, ಕಂಪೆನಿ ಹಿಂದಿರುಗಲು ಬಿಡುತ್ತಿಲ್ಲ’’ ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ತಾವು ಇದುವರೆಗೆ ನಮ್ಮ ಕೆಲಸದ ಸೂಕ್ತ ಪಾವತಿಯನ್ನು ಸ್ವೀಕರಿಸಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಮಧ್ಯೆಪ್ರವೇಶಿಸುವಂತೆ ವಲಸೆ ಕಾರ್ಮಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಹೋರಾಟಗಾರ ಸಿಖಂದರ್ ಅಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News