×
Ad

Jharkhand | UPSC ಅನುತ್ತೀರ್ಣ; 7 ವರ್ಷ IAS ಅಧಿಕಾರಿಯ ಸೋಗು ಹಾಕಿದ್ದ ವಂಚಕನ ಬಂಧನ

Update: 2026-01-04 20:54 IST

Photo Credit : indianexpress.com

ಪಲಾಮು (ಜಾರ್ಖಂಡ್): ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದರೂ, ಸುಮಾರು ಏಳು ವರ್ಷಗಳ ಕಾಲ ತಾನು IAS ಅಧಿಕಾರಿ ಎಂದು ಸೋಗು ಹಾಕಿಕೊಂಡು ಅಡ್ಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

ತನ್ನ ಸಂಬಂಧಿಕರೊಬ್ಬರಿಗೆ ಸಂಬಂಧಿಸಿದ ಭೂ ವಿವಾದದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಪಲಾಮು ಜಿಲ್ಲೆಯ ಹುಸೇನಾಬಾದ್ ಪೊಲೀಸ್ ಠಾಣೆಗೆ ಬಂದಿದ್ದ ಈ ವ್ಯಕ್ತಿಯ ವರ್ತನೆ ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು. ಹೆಚ್ಚಿನ ವಿಚಾರಣೆ ವೇಳೆ, ಆತ ಮೊದಲಿಗೆ ತಾನು IAS ಅಧಿಕಾರಿ ಎಂದು ಹೇಳಿಕೊಂಡಿದ್ದರೂ, ನಂತರ ತಾನು IAS ಅಲ್ಲ, IPTAFS ಅಧಿಕಾರಿ ಎಂದು ಹೇಳಿಕೊಂಡು, ಈ ಸೇವೆ IASಗೆ ಸಮಾನವಾಗಿದೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಹುಸೇನಾಬಾದ್ ಪೊಲೀಸ್ ಠಾಣಾಧಿಕಾರಿ ಸೋನು ಕುಮಾರ್ ಚೌಧರಿ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ಜನವರಿ 2ರಂದು 35 ವರ್ಷದ ವ್ಯಕ್ತಿಯೊಬ್ಬ ಠಾಣೆಗೆ ಬಂದು, ತಾನು 2014ರ ಬ್ಯಾಚ್‌ ನ ಒಡಿಶಾ ಕೇಡರ್ IAS ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಭುವನೇಶ್ವರದಲ್ಲಿ ಮುಖ್ಯ ಲೆಕ್ಕಪತ್ರಾಧಿಕಾರಿಯಾಗಿ ನಿಯೋಜನೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ ಆತ, ತನ್ನ ಹುಟ್ಟೂರು ಕುಖಿ ಗ್ರಾಮದಲ್ಲಿ ವೈಯಕ್ತಿಕ ಕೆಲಸಕ್ಕಾಗಿ ರಜೆಯಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಇದೇ ವೇಳೆ, ಹುಸೇನಾಬಾದ್ ಪ್ರದೇಶದಲ್ಲಿ ತನ್ನ ಸಂಬಂಧಿಕರೊಬ್ಬರಿಗೆ ಸಂಬಂಧಿಸಿದ ಭೂ ವಿವಾದದಲ್ಲಿ ನೆರವು ಪಡೆಯಲು ಠಾಣೆಗೆ ಬಂದಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಈ ವೇಳೆ ಪೊಲೀಸರು IAS ಅಧಿಕಾರಿಗೆ ನೀಡುವ ಶಿಷ್ಟಾಚಾರವನ್ನು ಪಾಲಿಸಿದರು. ಆದರೆ ಆತ ಒಡಿಶಾ ಕೇಡರ್ ಅಧಿಕಾರಿ ಎಂದು ಹೇಳಿಕೊಂಡಿದ್ದರೂ, ಡೆಹ್ರಾಡೂನ್, ಹೈದರಾಬಾದ್ ಹಾಗೂ ಭುವನೇಶ್ವರಗಳಲ್ಲಿ ನಿಯೋಜನೆಯಾಗಿದ್ದೇನೆ ಎಂದು ಹೇಳಿದ್ದರಿಂದ ಠಾಣಾಧಿಕಾರಿಗೆ ಅನುಮಾನ ಹುಟ್ಟಿತು. ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ, ಆತ ತನ್ನ ಹೇಳಿಕೆಯನ್ನು ಬದಲಾಯಿಸಿ ತಾನು IAS ಅಲ್ಲ, IPTAFS ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.

“ಯಾವುದೇ ಅಧಿಕೃತ ಮಾತುಕತೆಯ ವೇಳೆ ಒಬ್ಬ ಸೇವೆಯಲ್ಲಿರುವ ಅಧಿಕಾರಿ ತನ್ನ ಹುದ್ದೆಯನ್ನು ಹೀಗೆ ಆಕಸ್ಮಿಕವಾಗಿ ಬದಲಾಯಿಸುವುದಿಲ್ಲ. ಈ ಬದಲಾವಣೆಯೇ ಗಂಭೀರ ಅನುಮಾನಕ್ಕೆ ಕಾರಣವಾಯಿತು,” ಎಂದು ಠಾಣಾಧಿಕಾರಿ ಸೋನು ಕುಮಾರ್ ಚೌಧರಿ ತಿಳಿಸಿದ್ದಾರೆ.

ಆ ವ್ಯಕ್ತಿ ಪೊಲೀಸ್ ಠಾಣೆಯಿಂದ ಹೊರಟ ಬಳಿಕ, ಈ ವಿಷಯವನ್ನು ಹುಸೇನಾಬಾದ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅವರಿಗೆ ತಿಳಿಸಲಾಯಿತು. ಎಸ್‌ಡಿಪಿಒ ಮಟ್ಟದಲ್ಲಿ ನಡೆಸಿದ ಪರಿಶೀಲನೆಯಲ್ಲಿ, ಆತ ನೀಡಿದ್ದ ಹೆಸರು, ಬ್ಯಾಚ್, ಕೇಡರ್ ಅಥವಾ ಸೇವಾ ವಿವರಗಳಿಗೆ ಹೊಂದುವ ಯಾವುದೇ ಅಧಿಕಾರಿ ಇಲ್ಲ ಎಂಬುದು ದೃಢಪಟ್ಟಿತು. ಅನಂತರ ಆ ವ್ಯಕ್ತಿಯನ್ನು ಹತ್ತಿರದ ಪ್ರದೇಶದಿಂದ ಪತ್ತೆಹಚ್ಚಿ ಮತ್ತೆ ಪೊಲೀಸ್ ಠಾಣೆಗೆ ಕರೆತರಲಾಯಿತು. ಜಾರ್ಖಂಡ್ ನೋಂದಣಿ ಸಂಖ್ಯೆಯುಳ್ಳ ಆತನ ಹುಂಡೈ ಔರಾ ಕಾರನ್ನೂ ವಶಕ್ಕೆ ಪಡೆಯಲಾಯಿತು. ನಿರಂತರ ವಿಚಾರಣೆಯ ವೇಳೆ, ಆತ ತಾನು IAS ಅಧಿಕಾರಿ ಅಲ್ಲ ಹಾಗೂ ಯಾವುದೇ ಕೇಂದ್ರ ನಾಗರಿಕ ಸೇವೆಯಲ್ಲಿಲ್ಲ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರ್ ನಗರ ಪೊಲೀಸರು ಹಾಗೂ ಸ್ಥಳೀಯ ಮೂಲಗಳ ಮೂಲಕ ನಡೆಸಿದ ವಿಚಾರಣೆಯಲ್ಲಿ, ಈ ವ್ಯಕ್ತಿ ಹಲವು ವರ್ಷಗಳಿಂದ ತನ್ನ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು IAS ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಕಾರಿನ ಮುಂಭಾಗದಲ್ಲಿ “ಭಾರತ ಸರ್ಕಾರ, ದೂರಸಂಪರ್ಕ ಇಲಾಖೆ” ಎಂದು ಬರೆದಿರುವ ನೀಲಿ ಬಣ್ಣದ ನಾಮಫಲಕ ಅಂಟಿಸಿಕೊಂಡು ಸಂಚರಿಸುತ್ತಿದ್ದ ಆತ, ಪೊಲೀಸ್ ಠಾಣೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರಭಾವ ಬೀರುವ ಉದ್ದೇಶದಿಂದ ಈ ನಕಲಿ ಗುರುತನ್ನು ಬಳಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ, IAS ಅಧಿಕಾರಿ ಆಗುವುದು ತನ್ನ ತಂದೆಯ ಕನಸಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ದಿಲ್ಲಿಗೆ ತೆರಳಿ ನಾಲ್ಕು ಬಾರಿ ಪರೀಕ್ಷೆ ಬರೆದಿದ್ದೇನೆ; ಒಮ್ಮೆ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲನಾದೆ ಎಂದು ಅವನು ತಿಳಿಸಿದ್ದಾನೆ. ತಂದೆಯ ನಿರಾಶೆಯನ್ನು ಎದುರಿಸಲು ಆಗದೆ, ತಾನು IAS ಅಧಿಕಾರಿಯಾಗಿದ್ದೇನೆ ಎಂದು ಕುಟುಂಬಕ್ಕೆ ತಿಳಿಸಿ, ವರ್ಷಗಳ ಕಾಲ ಈ ವಂಚನೆಯನ್ನು ಮುಂದುವರಿಸಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ.

ಆತನ ಬಳಿ, ರಾಜೇಶ್ ಕುಮಾರ್ ಜೂನಿಯರ್–ಗ್ರೇಡ್ ಮುಖ್ಯ ಖಾತೆ ಅಧಿಕಾರಿ ಎಂದು ಹೇಳಿಕೊಳ್ಳುವ ನಕಲಿ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಚಾಣಕ್ಯ IAS ಅಕಾಡೆಮಿ ಗುರುತಿನ ಚೀಟಿ, ಲೈಬ್ರರಿ ಕಾರ್ಡ್ ಹಾಗೂ ಕಾರಿನ ಮೇಲಿದ್ದ ಸರ್ಕಾರಿ ನೀಲಿ ನಾಮಫಲಕ ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಹುಸೇನಾಬಾದ್ ಎಸ್‌ಡಿಪಿಒ ಮುಹಮ್ಮದ್ ಯಾಕೂಬ್, ಇಂತಹ ಸೋಗು ಹಾಕುವ ಪ್ರಕರಣಗಳು ಅಪರೂಪವಲ್ಲ ಎಂದು ಹೇಳಿದರು. “ಸೇವೆಯ ವಿವರ, ಹುದ್ದೆ ಅಥವಾ ಕೇಡರ್ ಬಗ್ಗೆ ಆಳವಾಗಿ ಪ್ರಶ್ನಿಸಿದಾಗ ಇಂತಹವರು ಗೊಂದಲಕಾರಿ ಉತ್ತರಗಳನ್ನು ನೀಡುತ್ತಾರೆ. IASನಿಂದ ಮತ್ತೊಂದು ಸೇವೆಗೆ ತಮ್ಮ ಹೇಳಿಕೆಯನ್ನು ಪದೇಪದೇ ಬದಲಾಯಿಸುವುದೇ ಎಚ್ಚರಿಕೆಯ ಸಂಕೇತ. ಈ ಪ್ರಕರಣದಲ್ಲಿ ಮೊದಲಿಗೆ ಆರೋಪಿಯೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯಿಂದಲೇ ಈ ವಂಚನೆ ಪತ್ತೆಯಾಗಲು ಕಾರಣವಾಯಿತು”, ಎಂದು ಅವರು ಹೇಳಿದರು.

ನಂತರ ಆ ವ್ಯಕ್ತಿಯನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News