×
Ad

ಆರ್ಜೆಡಿ, ಕಾಂಗ್ರೆಸ್ ನಿಂದ ಟಿಕೆಟ್ ನಿರಾಕರಣೆ: ಬಿಹಾರ ಚುನಾವಣಾ ಪ್ರಚಾರದಿಂದ ದೂರ ಉಳಿಯಲಿರುವ ಜಾರ್ಖಂಡ್ ಸಿಎಂ

Update: 2025-11-01 12:24 IST

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Photo: PTI) 

ರಾಂಚಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷಕ್ಕೆ ಆರ್ಜೆಡಿ ಹಾಗೂ ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವ ಕುರಿತು ಅಸಮಾಧಾನ ಭುಗಿಲೆದ್ದಿರುವ ಬೆನ್ನಿಗೇ, ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿಯಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ನೆರೆಯ ರಾಜ್ಯವಾದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೈತ್ರಿ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ತನಗೆ ಟಿಕೆಟ್ ನಿರಾಕರಿಸುವ ಮೂಲಕ, ತನ್ನ ವಿರುದ್ಧ ಪಿತೂರಿ ನಡೆಸಿದೆ ಎಂದು ಆರೋಪಿಸಿ, ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಿಂದಲೂ ಹಿಂದೆ ಸರಿದಿದೆ.

ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾದ ವಕ್ತಾರ ಮನೋಜ್ ಪಾಂಡೆ, “ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪಾಲ್ಗೊಳ್ಳುವುದಿಲ್ಲ. ಸದ್ಯದ ಮಟ್ಟಿಗೆ, ಬಿಹಾರ ಚುನಾವಣಾ ಪ್ರಚಾರಕ್ಕೆ ತೆರಳುವ ಯಾವ ಉದ್ದೇಶವೂ ನಮ್ಮ ಪಕ್ಷ ಹಾಗೂ ಹೇಮಂತ್ ಸೊರೇನ್ ಅವರಿಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುತ್ತಿಲ್ಲವೆಂದಾದ ಮೇಲೆ, ಅವರು ಯಾರ ಪರವಾಗಿ ಪ್ರಚಾರ ನಡೆಸುತ್ತಾರೆ?” ಎಂದು ಪ್ರಶ್ನಿಸಿದ ಅವರು, “ನಮ್ಮ ಪಕ್ಷ ಮಹಾಘಟಬಂಧನ್ ಮೈತ್ರಿಕೂಟದಲ್ಲಿಲ್ಲ ಎಂದ ಮೇಲೆ ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುವ ಪ್ರಶ್ನೆಯೇ ಇಲ್ಲ” ಎಂದು ಘೋಷಿಸಿದ್ದಾರೆ.

“ಒಂದು ವೇಳೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಬೇಕಾದಂತಹ ಪರಿಸ್ಥಿತಿ ಉದ್ಭವಿಸಿದರೆ, ಆಗ ಪಕ್ಷದ ನಾಯಕತ್ವವು ಸೂಕ್ತ ನಿರ್ಣಯ ಕೈಗೊಳ್ಳಲಿದೆ” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News