ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ 9 ವರ್ಷ; ಪ್ರಕರಣ ಮುಚ್ಚಲು ಸಿಬಿಐಗೆ ನ್ಯಾಯಾಲಯ ಅನುಮತಿ
ನಜೀಬ್ ಅಹ್ಮದ್ | PC : NDTV
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಮಾಜಿ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣವನ್ನು ಮುಚ್ಚಲು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ಅನುಮತಿ ನೀಡಿದೆ. ನಜೀಬ್ 2016 ಅಕ್ಟೋಬರ್ 15ರಿಂದ ನಾಪತ್ತೆಯಾಗಿದ್ದಾರೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜ್ಯೋತಿ ಮಹೇಶ್ವರಿ ಸಿಬಿಐಯ ಮುಚ್ಚುಗಡೆ ವರದಿಯನ್ನು ಸ್ವೀಕರಿಸಿದರು. ಆದರೆ, ಯಾವುದೇ ಪುರಾವೆ ಕಂಡುಬಂದರೆ ಪ್ರಕರಣವನ್ನು ಮರುತೆರೆಯುವ ಸ್ವಾತಂತ್ರ್ಯವನ್ನೂ ನ್ಯಾಯಾಧೀಶರು ನೀಡಿದರು.
2018ರಲ್ಲಿ, ನಜೀಬ್ ರನ್ನು ಪತ್ತೆಹಚ್ಚುವ ತನ್ನ ಪ್ರಯತ್ನಗಳು ಫಲಕಾರಿಯಾಗಿಲ್ಲ ಎಂದು ಹೇಳಿ ಸಿಬಿಐಯು ಪ್ರಕರಣದ ಕುರಿತ ತನ್ನ ತನಿಖೆಯನ್ನು ಮುಚ್ಚಿತ್ತು. ಬಳಿಕ, ಸಿಬಿಐಯು ಮುಚ್ಚುಗಡೆ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ದಿಲ್ಲಿ ಹೈಕೋರ್ಟ್‌ನಿಂದ ಅನುಮತಿ ಪಡೆದ ಬಳಿಕ ವರದಿಯನ್ನು ಸಲ್ಲಿಸಿತ್ತು.
ನಜೀಬ್ ಅಹ್ಮದ್‌ರ ತಾಯಿ ಫಾತಿಮಾ ನಫೀಸ್ ಸಿಬಿಐಯ ಮುಚ್ಚುಗಡೆ ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ‘‘ಇದೊಂದು ರಾಜಕೀಯ ಪ್ರಕರಣವಾಗಿದ್ದು, ಸಿಬಿಐಯು ತನ್ನ ರಾಜಕೀಯ ಧಣಿಗಳ ಒತ್ತಡಕ್ಕೆ ಮಣಿದಿದೆ’’ ಎಂಬುದಾಗಿ ಅವರ ವಕೀಲರು ವಾದಿಸಿದ್ದರು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಎಮ್.ಎಸ್‌ಸಿ. ಬಯೋಟೆಕ್ನಾಲಜಿ ವಿದ್ಯಾರ್ಥಿಯಾಗಿದ್ದ ನಜೀಬ್, 2016 ಅಕ್ಟೋಬರ್ 15ರ ಮುನ್ನಾ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿರುವ ಕೆಲವು ವಿದ್ಯಾರ್ಥಿಗಳೊಂದಿಗೆ ಘರ್ಷಣೆ ನಡೆದ ಬಳಿಕ ವಿಶ್ವವಿದ್ಯಾನಿಲಯದ ಮಹಿ-ಮಾಂಡವಿ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದರು.
ಆದರೆ, ನಜೀಬ್ ಆಟೊ ರಿಕ್ಷಾವೊಂದರಲ್ಲಿ ವಿಶ್ವವಿದ್ಯಾನಿಲಯ ಆವರಣದಿಂದ ಹೊರಹೋಗುತ್ತಿರುವುದನ್ನು ನೋಡಿರುವುದಾಗಿ ಹಾಸ್ಟೆಲ್ ವಾರ್ಡನ್ ಹೇಳಿದ್ದರು.
ಪ್ರಕರಣದ ತನಿಖೆಯನ್ನು ಮೊದಲು ದಿಲ್ಲಿ ಪೊಲೀಸರು ನಡೆಸಿದರಾದರೂ, ಬಳಿಕ ಸಿಬಿಐಗೆ ಒಪ್ಪಿಸಲಾಯಿತು. ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಬಳಿಕ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯಲು ನಜೀಬ್ ನಿರಾಕರಿಸಿದ್ದರು ಎಂಬುದಾಗಿ ಸಿಬಿಐಯು ಎಪ್ರಿಲ್ ನಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ನಜೀಬ್ ಆಸ್ಪತ್ರೆಗೆ ಹೋಗಿರುವುದನ್ನು ಸಾಬೀತುಪಡಿಸುವ ದಾಖಲೆಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕರಿಂದ ಹೇಳಿಕೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದಾಗಿಯೂ ಅದು ಹೇಳಿದೆ.
►ಅಂದು ಏನು ನಡೆಯಿತು?
ರಜೆಯ ಬಳಿಕ, ನಜೀಬ್ 2016 ಅಕ್ಟೋಬರ್ 13ರಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ವಾಪಸಾಗಿದ್ದರು ಎಂದು ಅವರ ತಾಯಿ ಹೇಳಿದ್ದಾರೆ. ಅಕ್ಟೋಬರ್ 15ರ ರಾತ್ರಿ ಅವರು ತನ್ನ ತಾಯಿಗೆ ಕರೆ ಮಾಡಿ, ತನಗೆ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಅಲ್ಲೊಂದು ಜಗಳವಾಗಿತ್ತು ಮತ್ತು ಅದರಲ್ಲಿ ನಜೀಬ್ ಗಾಯಗೊಂಡಿದ್ದಾನೆ ಎಂಬುದಾಗಿ ಅವರ ರೂಮ್ ಮೇಟ್ ಕಾಸಿಮ್ ತನಗೆ ಹೇಳಿದ್ದರು ಎಂದು ತನ್ನ ದೂರಿನಲ್ಲಿ ಫಾತಿಮಾ ನಫೀಸ್ ಹೇಳಿದ್ದಾರೆ.
ಮಾರನೇ ದಿನ, ಮಗನನ್ನು ಭೇಟಿಯಾಗಲು ಅವರು ಉತ್ತರಪ್ರದೇಶದ ಬುಲಂದ್ ಶಹರ್ ನಿಂದ ದಿಲ್ಲಿಗೆ ಹೋದರು. ಅವರು ದಿಲ್ಲಿ ತಲುಪಿದಾಗ ಮಗನೊಂದಿಗೆ ಮಾತನಾಡಿ, ಭೇಟಿಯಾಗಲು ಹಾಸ್ಟೆಲ್ ಗೆ ಬರುತ್ತಿರುವುದಾಗಿ ತಿಳಿಸಿದರು. ಆದರೆ, ಮಹಿ-ಮಾಂಡ್ವಿ ಹಾಸ್ಟೆಲ್ ನಲ್ಲಿರುವ ಮಗನ ಕೋಣೆಗೆ ಹೋದಾಗ ಅಲ್ಲಿ ನಜೀಬ್ ಇರಲಿಲ್ಲ. ಅಂದಿನಿಂದ ಅವರು ಪತ್ತೆಯಾಗಿಲ್ಲ.