×
Ad

ಜ್ಯೋತಿ ಮಲ್ಹೋತ್ರಾ ಜೊತೆ ಸಂಪರ್ಕ ಹೊಂದಿದ್ದ ಒಡಿಶಾದ ಯೂಟ್ಯೂಬರ್ ಹಿಂದೆ ಬಿದ್ದ ಪೊಲೀಸರು!

Update: 2025-05-19 16:41 IST

ಜ್ಯೋತಿ ಮಲ್ಹೋತ್ರಾ | PC : NDTV  

ಹೊಸದಿಲ್ಲಿ: ಒಡಿಶಾದ ಪುರಿ ಮೂಲದ ಯೂಟ್ಯೂಬರ್ ಮತ್ತು 'ಪಾಕ್ ಗೂಢಾಚಾರೆ' ಜ್ಯೋತಿ ಮಲ್ಹೋತ್ರಾ ನಡುವಿನ ಸಂಬಂಧದ ಬಗ್ಗೆ ಒಡಿಶಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಹರ್ಯಾಣ ಪೊಲೀಸರು ಮೇ 17 ರ ಶನಿವಾರದಂದು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಬಂಧಿಸಿದ್ದರು.

ಜ್ಯೋತಿ ಮಲ್ಹೋತ್ರಾ ʼಟ್ರಾವೆಲ್ ವಿತ್ ಜೊʼ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾಳೆ. ದಿಲ್ಲಿಯಲ್ಲಿ ಪಾಕಿಸ್ತಾನ ಹೈಕಮಿಷನ್ ನಲ್ಲಿ ಕೆಲಸ ಮಾಡುತ್ತಿರುವ ದಾನಿಶ್ ಎಂಬ ಉದ್ಯೋಗಿಯೊಂದಿಗೆ ಆಕೆ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ. ಮೇ 13 ರಂದು ಭಾರತವು ಪಾಕಿಸ್ತಾನಿ ಅಧಿಕಾರಿ ದಾನಿಶ್ ನನ್ನು ಬೇಹುಗಾರಿಕೆಯಲ್ಲಿ ತೊಡಗಿದ್ದಕ್ಕಾಗಿ ಹೊರಹಾಕಿತ್ತು.

ಜ್ಯೋತಿ ಮಲ್ಹೋತ್ರಾ ಜೊತೆ ಒಡಿಶಾದ ಪುರಿಯ ಯೂಟ್ಯೂಬರ್ ಸಂಪರ್ಕದ ಕುರಿತು ಒಡಿಶಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭದ್ರತೆಯ ಕಾರಣಕ್ಕೆ ಪುರಿಯ ಯೂಟ್ಯೂಬರ್ ಹೆಸರನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.

ತನಿಖೆಗಾಗಿ ಪೊಲೀಸ್ ಸಿಬ್ಬಂದಿಯ ತಂಡವು ಪುರಿಯಲ್ಲಿರುವ ಯೂಟ್ಯೂಬರ್ ನ ನಿವಾಸಕ್ಕೆ ಭೇಟಿ ನೀಡಿತ್ತು. ಪೊಲೀಸರ ಪ್ರಕಾರ, ಜ್ಯೋತಿ ಮಲ್ಹೋತ್ರಾ ಸೆಪ್ಟೆಂಬರ್ 2024 ರಲ್ಲಿ ಒಡಿಶಾದ ಪುರಿಗೆ ಭೇಟಿ ನೀಡಿದ್ದಳು. ಆ ವೇಳೆ ಆಕೆ ಪುರಿಯ ಮಹಿಳಾ ಯೂಟ್ಯೂಬರ್ ಸಂಪರ್ಕಕ್ಕೆ ಬಂದಿದ್ದಳು.

ಆ ಬಳಿಕ ಮಹಿಳಾ ಯೂಟ್ಯೂಬರ್ ಇತ್ತೀಚೆಗೆ ಪಾಕಿಸ್ತಾನದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೂ ಪ್ರಯಾಣಿಸಿದ್ದರು ಎಂದು ಪುರಿ ಎಸ್ಪಿ ವಿನಿತ್ ಅಗ್ರಾವಾ ಹೇಳಿದ್ದಾರೆ. "ಕಳೆದ ವರ್ಷ ಜ್ಯೋತಿ ಮಲ್ಹೋತ್ರಾ ಪುರಿಗೆ ಭೇಟಿ ನೀಡಿದ್ದರು ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಈ ಕುರಿತು ನಾವು ಪರಿಶೀಲಿಸುತ್ತಿದ್ದೇವೆ. ಆ ಬಳಿಕ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬಹುದು" ಎಂದು ಅಗರ್ವಾಲ್ ಹೇಳಿದರು.

ಪುರಿಯ ಮಹಿಳಾ ಮಲ್ಹೋತ್ರಾ ಅವರೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದ್ದಾರೆಯೇ ಎಂದು ಕೇಳಿದಾಗ, ಅಗರ್ವಾಲ್, "ಹರ್ಯಾಣ ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಾವು ಅವರಿಗೆ ಅಗತ್ಯವಾದ ಸಹಾಯವನ್ನು ನೀಡುತ್ತಿದ್ದೇವೆ" ಎಂದು ಹೇಳಿದರು. ಮಲ್ಹೋತ್ರಾಳು ಪುರಿಗೆ ಭೇಟಿ ನೀಡಿದ್ದ ಹಿಂದಿನ ಉದ್ದೇಶವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆಕೆ ಎಲ್ಲಿ ಉಳಿದುಕೊಂಡಿದ್ದಳು, ಯಾರನ್ನು ಸಂಪರ್ಕಿಸಿದ್ದಳು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ನಡೆದಿವೆಯೇ ಎಂದು ಪರಿಶೀಲಿಸಲಾಗುವುದು ಎಂದು ಪುರಿ ಎಸ್ಪಿ ಹೇಳಿದರು.

► ಜೈ ಹಿಂದ್ ಎಂದು ಪೋಸ್ಟ್ ಮಾಡಿದ ಪುರಿ ಯೂಟ್ಯೂಬರ್

"ಜ್ಯೋತಿ ನನ್ನ ಸ್ನೇಹಿತೆ. ಯೂಟ್ಯೂಬ್ ಮೂಲಕ ಅವಳನ್ನು ನಾನು ಸಂಪರ್ಕಿಸಿದ್ದೆ. ಅವಳ ಮೇಲೆ ಹೊರಿಸಲಾದ ಯಾವುದೇ ಆರೋಪದ ಬಗ್ಗೆ ನನಗೆ ತಿಳಿದಿರಲಿಲ್ಲ. ಅವಳು ಶತ್ರು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಳೆಂದು ನನಗೆ ತಿಳಿದಿದ್ದರೆ ನಾನು ಅವಳೊಂದಿಗೆ ಸಂಪರ್ಕದಲ್ಲಿರುತ್ತಿರಲಿಲ್ಲ. ಯಾವುದೇ ತನಿಖಾ ಸಂಸ್ಥೆಯು ಈ ಕುರಿತು ನನ್ನನ್ನು ಪ್ರಶ್ನಿಸಲು ಬಯಸಿದರೆ, ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಎಲ್ಲಕ್ಕಿಂತ ರಾಷ್ಟ್ರ ಮಿಗಿಲು. ಜೈ ಹಿಂದ್" ಎಂದು ಪುರಿ ಯೂಟ್ಯೂಬರ್ ಪೋಸ್ಟ್ ಮಾಡಿದ್ದಾರೆ.

ಪುರಿ ಯೂಟ್ಯೂಬರ್ ಈಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಖಾಸಗಿಯನ್ನಾಗಿ ಮಾಡಿದ್ದಾರೆ. ಅವರ ಫಾಲೋವರ್ಸ್ ಗಳಾಗಿರುವ ಬಳಕೆದಾರರು ಮಾತ್ರ ಈಗ ಇನ್ಸ್ಟಾಗ್ರಾಮ್ ಪುಟದಲ್ಲಿರುವ ಅವರ ಪೋಸ್ಟ್ ಗಳನ್ನು ನೋಡಬಹುದು.

ಪುರಿ ಮೂಲದ ಯೂಟ್ಯೂಬರ್ ಗೆ ದೊಡ್ಡ ಫಾಲೋವರ್ ಗಳಿಲ್ಲ. ಆಕೆಗೆ ಯೂಟ್ಯೂಬ್ನಲ್ಲಿ 14,600 ಚಂದಾದಾರರನ್ನು ಮತ್ತು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 20,000 ಫಾಲೋವರ್ ಗಳಿದ್ದಾರೆ. ಇದು ಜ್ಯೋತಿ ಮಲ್ಹೋತ್ರಾ ಳ ಚಂದಾದಾರರಿಗಿಂತ ತುಂಬಾ ಕಡಿಮೆ. ಪುರಿಯ ಯೂಟ್ಯೂಬರ್ ಒಡಿಶಾ ಮತ್ತು ದೇಶದ ಇತರ ಭಾಗಗಳಲ್ಲಿ ಆಕೆ ಅನ್ವೇಷಿಸುವ ಸ್ಥಳಗಳ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ, ಪುರಿ ಯೂಟ್ಯೂಬರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News