×
Ad

ಜು. 8, 9ರಂದು ಕೇರಳದಲ್ಲಿ ಸತತ 2 ದಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಾಮಾನ್ಯ ಜನಜೀವನ ಅಸ್ತವ್ಯಸ್ತ ಸಾಧ್ಯತೆ

Update: 2025-07-07 21:59 IST

ಸಾಂದರ್ಭಿಕ ಚಿತ್ರ

ತಿರುವನಂತಪುರ: ಕೇರಳದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಎರಡು ದಿನಗಳ ಕಾಲ ಅಡ್ಡಿ ಉಂಟಾಗಲಿದೆ. ಖಾಸಗಿ ಬಸ್ ಮಾಲಕರು ಮಂಗಳವಾರ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದ್ದರೆ, ವಿವಿದ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.

ಬಸ್ ಮಾಲಕರ ಪ್ರತಿನಿಧಿಗಳು ಹಾಗೂ ಸಾರಿಗೆ ಆಯುಕ್ತರ ನಡುವಿನ ಸಭೆಯಲ್ಲಿ ಬಸ್ ಮಾಲಕರ ಪ್ರತಿನಿಧಿಗಳು ಎತ್ತಿದ ಸಮಸ್ಯೆಗಳು ಪರಿಹಾರವಾಗದೇ ಇರುವುದರಿಂದ ಬಸ್ ಮಾಲಕರ ಜಂಟಿ ಸಮಿತಿ ಅಡಿಯ ಖಾಸಗಿ ಬಸ್ ಮಾಲಕರು ಮಂಗಳವಾರ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ದೀರ್ಘಕಾಲದಿಂದ ಬಾಕಿ ಇರುವ ತಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸದೇ ಇದ್ದರೆ, ಜುಲೈ 22ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದು ಕೂಡ ಕೇರಳದಾದ್ಯಂತದ ಖಾಸಗಿ ಬಸ್ ಮಾಲಕರು ಎಚ್ಚರಿಸಿದ್ದಾರೆ.

ವಿಳಂಬ ಮಾಡದೆ ಪರವಾನಿಗೆ ನವೀಕರಣ, ಲಿಮಿಟೆಡ್ ಸ್ಟಾಪ್ ಬಸ್‌ಗಳನ್ನು ಸಾಮಾನ್ಯ ಸೇವೆಗಳಿಗೆ ಪರಿವರ್ತಿಸುವ ನಿರ್ದೇಶನ ಹಿಂಪಡೆಯುವುದು, ವಿದ್ಯಾರ್ಥಿ ರಿಯಾಯತಿ ದರಗಳನ್ನು ಪರಿಷ್ಕರಿಸುವುದು ಹಾಗೂ ಬಸ್ ಕಾರ್ಮಿಕರು, ಇತರರಿಗೆ ಪೊಲೀಸ್ ಅನುಮತಿ ಪ್ರಮಾಣ ಪತ್ರದ ಅಗತ್ಯತೆಯನ್ನು ಹಿಂಪಡೆಯುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಬಸ್ ಮಾಲಕರು ಆಗ್ರಹಿಸಿದ್ದಾರೆ.

17 ಅಂಶಗಳ ಬೇಡಿಕೆಗಳ ಈಡೇರಿಕೆಗಾಗಿ 10 ಕಾರ್ಮಿಕ ಸಂಘಟನೆಗಳು ಜುಲೈ 9ರಂದು ಕರೆ ನೀಡಿರುವ 24 ಗಂಟೆಗಳ ರಾಷ್ಟ್ರ ವ್ಯಾಪಿ ಮುಷ್ಕರ ಮಂಗಳವಾರ ಮಧ್ಯರಾತ್ರಿಯಿಂದ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News