ಕೇರಳ ಕಾಂಗ್ರೆಸ್ ನ ‘ಬೀಡಿ-ಬಿಹಾರ’ ಪೋಸ್ಟ್: ತೇಜಸ್ವಿ ಯಾದವ್ ಖಂಡನೆ
ತೇಜಸ್ವಿ ಯಾದವ್ (Photo: PTI)
ಪಾಟ್ನಾ: ಬಿಹಾರವನ್ನು ಬೀಡಿಗೆ ಹೋಲಿಕೆ ಮಾಡಿದ್ದ ಕೇರಳ ಕಾಂಗ್ರೆಸ್ ಟ್ವೀಟ್ ಬಿಹಾರದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ್ದು, ಪಕ್ಷಾತೀತವಾಗಿ ಖಂಡನೆಗೊಳಗಾಗಿದೆ. ಇದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ವಿವಿಧ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.
“ಬೀಡಿಗಳು ಹಾಗೂ ಬಿಹಾರ ‘ಬಿ’ ಅಕ್ಷರದಿಂದ ಪ್ರಾರಂಭಗೊಳ್ಳುತ್ತವೆ. ಇನ್ನು ಮುಂದೆ ಇವೆರಡನ್ನು ಪಾಪ ಎಂದು ಭಾವಿಸುವಂತಿಲ್ಲ” ಎಂದು ಬೀಡಿಯ ಮೇಲೆ ವಿಧಿಸಲಾಗಿದ್ದ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಕೆ ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಈ ಟ್ವೀಟ್ ವ್ಯಂಗ್ಯ ಮಾಡಿತ್ತು. ಆದರೆ ಸಿಗರೇಟುಗಳು ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇ. 40ಕ್ಕೆ ಏರಿಕೆ ಮಾಡಲಾಗಿದೆ. ಈ ಟ್ವೀಟ್ ಅನ್ನು ಕೇರಳ ಕಾಂಗ್ರೆಸ್ ತಕ್ಷಣವೇ ಹಿಂಪಡೆದಿದೆ.
ಈ ಕುರಿತು ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ಕೇರಳ ಕಾಂಗ್ರೆಸ್ ಇಂತಹ ಹೇಳಿಕೆ ನೀಡಿರುವುದು ನನಗೆ ತಿಳಿದಿಲ್ಲ. ನಾನು ಆ ಪೋಸ್ಟ್ ಅನ್ನು ನೋಡಿಲ್ಲ. ಹೀಗಾಗಿ, ನಾನು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಒಂದು ವೇಳೆ ಕೇರಳ ಕಾಂಗ್ರೆಸ್ ಏನಾದರೂ ಬಿಹಾರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ, ಅದು ಖಂಡಿತ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿದ್ದಾರೆ.
ಬಿಹಾರ ವಿಧಾನಸಭೆಗೆ ಇನ್ನೆರಡು ತಿಂಗಳಲ್ಲಿ ಚುನಾವಣೆ ಇರುವ ಸೂಕ್ಷ್ಮ ಘಟ್ಟದಲ್ಲಿ ಈ ಹೇಳಿಕೆ ಬಂದಿದ್ದು, ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, “ಅವರು ಮೊದಲು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ತಾಯಿಗೆ ಅವಮಾನಿಸಿದರು. ಇದೀಗ ಇಡೀ ಬಿಹಾರವನ್ನು ಅವಮಾನಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಿಜ ಚಾರಿತ್ರ್ಯವಾಗಿದ್ದು, ದೇಶದ ಜನರ ಮುಂದೆ ಬಯಲಾಗಿದೆ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಈ ಪೋಸ್ಟ್ ಅನ್ನು ತೀವ್ರ ನಾಚಿಕೆಗೇಡು ಎಂದು ಖಂಡಿಸಿರುವ ಜೆಡಿಯು ಕಾರ್ಯಾಧ್ಯಾಕ್ಷ ಸಂಜಯ್ ಝಾ, “ಬಿ ಕೇವಲ ಬೀಡಿಯ ಅರ್ಥವನ್ನು ಮಾತ್ರ ನೀಡುವುದಿಲ್ಲ. ಅದು ಬುದ್ಧಿಯ ಅರ್ಥವನ್ನೂ ಹೊಂದಿದ್ದು, ನಿಮಗೆ ಅದರ ಕೊರತೆ ಇದೆ! ಬಿಹಾರವನ್ನು ಗೇಲಿ ಮಾಡುವ ಮೂಲಕ, ಕಾಂಗ್ರೆಸ್ ಬಿಹಾರದ ಜನತೆಯನ್ನು ಮತ್ತೊಮ್ಮೆ ಅವಮಾನಿಸಿದೆ ಮಾತ್ರವಲ್ಲ, ದೇಶದ ವೈಭವಯುತ ಇತಿಹಾಸ ಮತ್ತು ಪ್ರಜಾತಂತ್ರವನ್ನೂ ಗೇಲಿ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಕೇರಳ ಕಾಂಗ್ರೆಸ್ ಘಟಕದ ಟ್ವೀಟ್ ಅನ್ನು ಸಮರ್ಥಿಸಿಕೊಂಡಿರುವ ಬಿಹಾರ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಕುಮಾರ್, “ಈ ಟ್ವೀಟ್ ಅನ್ನು ತಿರುಚಲಾಗಿದ್ದು, ಅದನ್ನು ಬಿಜೆಪಿ ಹಾಗೂ ಜೆಡಿಯು ಜನರ ಮುಂದೆ ತಪ್ಪಾಗಿ ಮಂಡಿಸಿದೆ” ಎಂದು ಹೇಳಿದ್ದಾರೆ. “ಅವರು ಸಂದೇಶವನ್ನು ತಿರುಚುವ ಮೂಲಕ, ಬಿಹಾರ ಹಾಗೂ ಬಿಹಾರದ ಜನತೆಗೆ ಅವಮಾನವೆಸಗಿದ್ದಾರೆ” ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.