×
Ad

ಕೇರಳ: ಎಡರಂಗದ ಸರಕಾರದ ಅವಧಿಯಲ್ಲಿ ಮುಸ್ಲಿಮ್ ತಾರತಮ್ಯ ಬಯಲಿಗೆಳೆದಿದ್ದ ಪತ್ರಕರ್ತನ ಫೇಸ್‌ಬುಕ್‌ ಖಾತೆಗೆ ಭಾರತದಲ್ಲಿ ನಿರ್ಬಂಧ!

Update: 2025-08-05 16:49 IST

ಬಾಬುರಾಜ ಭಗವತಿ |Photo credit: madhyamamonline.com

ತಿರುವನಂತಪುರ: ಸ್ಥಳೀಯ ಕಾನೂನುಗಳಡಿ ಕೇರಳ ಕಾನೂನು ಜಾರಿ ಸಂಸ್ಥೆಯ ಕಾನೂನುಬದ್ಧ ಮನವಿಯ ಮೇರೆಗೆ ಫೇಸ್‌ಬುಕ್ ಕೇರಳದ ಪತ್ರಕರ್ತ ಹಾಗೂ ಮಾನವ ಹಕ್ಕು ಕಾರ್ಯಕರ್ತ ಬಾಬುರಾಜ ಭಗವತಿ ಅವರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ. ಮೆಟಾದ ಈ ಕ್ರಮವು ರಾಜಕೀಯ ಸೆನ್ಸರ್‌ಶಿಪ್ ಮತ್ತು ಭಿನ್ನಾಭಿಪ್ರಾಯಗಳ ದಮನದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.

ಲೇಖಕ ಹಾಗೂ ಇಸ್ಲಾಮೋಫೋಬಿಯಾ ರೀಸರ್ಚ್ ಕಲೆಕ್ಟಿವ್‌ನ ಸಹ-ಸ್ಥಾಪಕರಾಗಿರುವ ಭಗವತಿ ಎಡರಂಗ ಸರಕಾರದ ಆಡಳಿತದ ಕೇರಳದಲ್ಲಿ ಸರಕಾರಿ ಪ್ರಾಯೋಜಿತ ದಮನಿಕೆ, ಕೋಮು ನಿರೂಪಣೆಗಳು ಮತ್ತು ಇಸ್ಲಾಮೋಫೋಬಿಯಾವನ್ನು ದಾಖಲಿಸುವ ತನ್ನ ಕಾರ್ಯಕ್ಕಾಗಿ ವ್ಯಾಪಕವಾಗಿ ಹೆಸರಾಗಿದ್ದಾರೆ.

ನಿರ್ಬಂಧವನ್ನು ಖಂಡಿಸಿರುವ ನಾಗರಿಕ ಹಕ್ಕುಗಳ ಸಂಘಟನೆಗಳು, ಇದು ಭಿನ್ನಾಭಿಪ್ರಾಯಗಳನ್ನು ಅಡಗಿಸುವ ಮತ್ತು ಸರಕಾರವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಬಣ್ಣಿಸಿವೆ. ಈ ಕ್ರಮವು ಕೋಮುವಾದ ಮತ್ತು ಸರಕಾರಿ ಅಧಿಕಾರದ ದುರುಪಯೋಗದ ನಿರಂತರ ಟೀಕಾಕಾರರಲ್ಲೋರ್ವರನ್ನು ಮೌನವಾಗಿಸುವುದಕ್ಕೆ ಸಮನಾಗಿದೆ ಎಂದು ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ಕೇರಳದ ರಾಜ್ಯ ಅಧ್ಯಕ್ಷ ತೌಫೀಕ್ ಮಂಪಡ್ ಹೇಳಿದರು.

ಭಗವತಿ ಅವರು ‘ಇಸ್ಲಾಮೋಫೋಬಿಯಾ ಪದನಂಗಳ್’ನ ಸಹಲೇಖಕರಾಗಿದ್ದು, ಡಾ.ಕೆ.ಅಷ್ರಫ್ ಅವರೊಂದಿಗೆ ಕೇರಳ ಇಸ್ಲಾಮೋಫೋಬಿಯಾ ರಿಪೋರ್ಟ್ 2024ರ ಸಹ-ಸಂಪಾದಕರೂ ಆಗಿದ್ದಾರೆ. ಈ ವರದಿಯು ಕೇರಳ ಮಾಧ್ಯಮಗಳಲ್ಲಿ ,ರಾಜಕೀಯ ನಿರೂಪಣೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಮುಸ್ಲಿಮ್ ವಿರೋಧಿ ಭಾವನೆಯತ್ತ ಗಮನವನ್ನು ಸೆಳೆದಿತ್ತು. ಭಗವತಿ ಅವರ ಫೇಸ್‌ಬುಕ್ ಪೇಜ್ ಜಾತೀಯತೆ, ಬಹುಸಂಖ್ಯಾತವಾದ ಮತ್ತು ನಾಗರಿಕ ಸ್ವಾತಂತ್ರ್ಯಗಳ ಉಲ್ಲಂಘನೆಗಳ ವಿಮರ್ಶಾತ್ಮಕ ಲೇಖನಗಳಿಗೆ ತಾಣವಾಗಿತ್ತು.

ಭಗವತಿಯವರ ಕಾರ್ಯಗಳು ಶೈಕ್ಷಣಿಕ ಮತ್ತು ಕಾರ್ಯಕರ್ತರ ವಲಯಗಳಲ್ಲಿ ಉಲ್ಲೇಖಿಸಲ್ಪಡುವುದು ಮುಂದುವರಿದಿದ್ದರೂ ಈ ನಿರ್ಬಂಧವು ಅವರನ್ನು ಭಾರತದೊಳಗೆ ಡಿಜಿಟಲ್ ಸಾರ್ವಜನಿಕ ಕ್ಷೇತ್ರದಿಂದ ಪರಿಣಾಮಕಾರಿಯಾಗಿ ಹೊರಗಿರಿಸಿದೆ. ತನ್ನನ್ನು ಜಾತ್ಯತೀತ ಮತ್ತು ಪ್ರಗತಿಪರ ಎಂದು ಪ್ರತಿಪಾದಿಸುವ ಎಡರಂಗ ಸರಕಾರವು ಇಂತಹ ಕ್ರಮವನ್ನು ತೆಗೆದುಕೊಂಡಿರುವುದು ವಿಶೇಷವಾಗಿ ಕಳವಳಕಾರಿಯಾಗಿದೆ ಎಂದು ಟೀಕಾಕಾರರು ವಾದಿಸಿದ್ದಾರೆ.

ಈ ಹಿಂದೆ ʼತೇಜಸ್ ಡೈಲಿʼಯಲ್ಲಿ ಕೆಲಸ ಮಾಡಿದ್ದ ಭಗವತಿ ಪ್ರಸ್ತುತ ವಿಮರ್ಶಾತ್ಮಕ ರಾಜಕೀಯ ಚಿಂತನೆಗಳನ್ನು ಕೇಂದ್ರೀಕರಿಸುವ ‘ಮರುವಾಕ್ಕು’ಮಲಯಾಳಂ ನಿಯತಕಾಲಿಕದ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ.

ಈ ಪ್ರಕರಣವು ಅಭಿವ್ಯಕ್ತಿ ಸ್ವಾತಂತ್ರ್ಯ,ಸರಕಾರದ ಕಣ್ಗಾವಲು ಮತ್ತು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆಯ ಸುತ್ತ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News