ಮನೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಹಾಯ ಪೆಟ್ಟಿಗೆಗೆ ಚಾಲನೆ ನೀಡಿದ ಕೇರಳ ಸರಕಾರ
ಸಾಂದರ್ಭಿಕ ಚಿತ್ರ
ಅಲಪ್ಪುಳ: ಕೇರಳದ ಕರಾವಳಿ ಜಿಲ್ಲೆಯೊಂದರಲ್ಲಿ ನಾಲ್ಕನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಆಕೆಯ ತಂದೆ ಹಾಗೂ ಮಲತಾಯಿಯ ದೌರ್ಜನ್ಯಕ್ಕೆ ಪ್ರತಿಯಾಗಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕೇರಳ ರಾಜ್ಯ ಸರಕಾರವು ‘ಸುರಕ್ಷಾ ಮಿತ್ರಂ’ ಯೋಜನೆಗೆ ಚಾಲನೆ ನೀಡಿದೆ ಎಂದು ಶನಿವಾರ ಕೇರಳ ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರೆ.
ದೌರ್ಜನ್ಯಕ್ಕೀಡಾದ ಬಾಲಕಿಯನ್ನು ಭೇಟಿಯಾಗಿ, ಆಕೆಯೊಂದಿಗೆ ಸಂವಾದ ನಡೆಸಿದ ನಂತರ, ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವನ್ ಕುಟ್ಟಿ, “ಯಾವುದೇ ಸನ್ನಿವೇಶದಲ್ಲೂ ಮಕ್ಕಳ ವಿರುದ್ಧದ ದೌರ್ಜನ್ಯವನ್ನು ಸಹಿಸುವುದಿಲ್ಲ” ಎಂದು ಎಚ್ಚರಿಸಿದರು.
“ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಲಕಿಗೆ ಎಲ್ಲ ಬಗೆಯ ರಕ್ಷಣೆ ಮತ್ತು ನೆರವು ಒದಗಿಸುವುದನ್ನು ಖಾತರಿಗೊಳಿಸಲಿದೆ” ಎಂದು ಅವರು ಭರವಸೆ ನೀಡಿದರು.
ಸಾಮಾನ್ಯ ಶಿಕ್ಷಣ ಇಲಾಖೆ ರೂಪಿಸಿರುವ ವಿಶೇಷ ಕಾರ್ಯ ಯೋಜನೆಯಡಿ ದೌರ್ಜನ್ಯಕ್ಕೀಡಾಗಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಸೂಕ್ತ ರಕ್ಷಣೆ ನೀಡುವುದರತ್ತ ಗಮನ ಹರಿಸಲಾಗುತ್ತದೆ. ಈ ಉಪಕ್ರಮದ ಭಾಗವಾಗಿ ಎಲ್ಲ ಶಾಲೆಗಳಲ್ಲೂ ‘ಸಹಾಯ ಪೆಟ್ಟಿಗೆ’ ಸ್ಥಾಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಇಲ್ಲಿ ವರದಿ ಮಾಡಬಹುದಾಗಿದೆ. ಈ ಪೆಟ್ಟಿಗೆಯ ಹೊಣೆಗಾರಿಕೆ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಮುಖ್ಯೋಪಾಧ್ಯಾ ಯಿನಿಯ ಮೇಲೆ ಇರಲಿದ್ದು, ವಾರಕ್ಕೊಮ್ಮೆ ಈ ವರದಿಗಳನ್ನು ಪರಾಮರ್ಶಿಸಿ, ಸೂಕ್ತ ಮಾಹಿತಿಯನ್ನು ಸಾಮಾನ್ಯ ಶಿಕ್ಷಣ ಇಲಾಖೆಗೆ ರವಾನಿಸಬೇಕಾಗುತ್ತದೆ.
ಮಕ್ಕಳ ವರ್ತನೆಯಲ್ಲಿನ ಬದಲಾವಣೆಗಳನ್ನು ಗಮನಿಸಲು ಹಾಗೂ ಅವರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗುತ್ತದೆ. ಮಕ್ಕಳೊಂದಿಗೆ ಸೌಹಾರ್ದಯುತ ಸಂವಾದಗಳು ಹಾಗೂ ಬೆಂಬಲದ ವಾತಾವರಣವನ್ನು ಸೃಷ್ಟಿಸಲು ಜಾಗರೂಕ ನಿಗಾವಣೆಯನ್ನು ಇರಿಸಲಾಗುತ್ತದೆ.