ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಹಿನ್ನೆಲೆ : ಕೇರಳದಲ್ಲಿ ಕಾಲ್ಡ್ರಿಫ್ ಸಿರಪ್ ಮಾರಾಟಕ್ಕೆ ನಿಷೇಧ
PC - NDTV
ತಿರುವನಂತಪುರ,ಅ.4: ಕೇರಳದಲ್ಲಿ ಕಾಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಹಾಗೂ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಘೋಷಿಸಿದ್ದಾರೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕಾಲ್ಡ್ರಿಫ್ ಕೆಮ್ಮು ಸಿರಪ್ ನಿರ್ದಿಷ್ಟ ಬ್ಯಾಚ್ ಕೇರಳದಲ್ಲಿ ವಿತರಣೆಯಾಗಿಲ್ಲವೆಂದು ರಾಜ್ಯ ಔಷದಿ ನಿಯಂತ್ರಣ ಇಲಾಖೆಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಕಾಲ್ಡ್ರಿಪ್ ಮಾರಾಟ, ವಿತರಣೆಯನ್ನು ಅಮಾನತಿನಲ್ಲಿಡಲಾಗಿದೆಯೆಂದು ಸಚಿವೆ ತಿಳಿಸಿದರು.
ಪ್ರಸಕ್ತ ಈ ಕೆಮ್ಮಿನ ಸಿರಪ್ ಅನ್ನು ಕೇರಳದಲ್ಲಿ ಎಂಟು ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಅವೆಲ್ಲವುಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಲಾಗಿದೆ. ಮುಂದಿನ ನೋಟಿಸ್‌ವರೆಗೆ ಕಾಲ್ಡ್ರಿಫ್ ಸಿರಪ್ ಮಾರಾಟವನ್ನು ನಿಲ್ಲಿಸುವಂತೆ ಎಲ್ಲಾ ಮೆಡಿಕಲ್ ಸ್ಟೋರ್‌ಗಳಿಗೆ ನಿರ್ದೇಶನ ನೀಡಲಾಗಿದೆಯೆಂದು ಅವರು ತಿಳಿಸಿದರು.