ಕರ್ನೂಲ್ ಬಸ್ ದುರಂತ : ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಆಂಧ್ರಪ್ರದೇಶ ಸರಕಾರ
Update: 2025-10-24 22:32 IST
Photo credit: PTI
ಹೈದರಾಬಾದ್ : ಕರ್ನೂಲ್ ಬಸ್ ದುರಂತದಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿರುವ ಆಂಧ್ರಪ್ರದೇಶ ಸರಕಾರ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.
ಮೃತರಲ್ಲಿ ಆಂಧ್ರಪ್ರದೇಶದ ಆರು, ತೆಲಂಗಾಣದ ಆರು, ಕರ್ನಾಟಕ ಮತ್ತು ತಮಿಳುನಾಡಿನ ತಲಾ ಇಬ್ಬರು ಹಾಗೂ ಬಿಹಾರ ಮತ್ತು ಒಡಿಶಾಗಳ ತಲಾ ಓರ್ವರು ಪ್ರಯಾಣಿಕರು ಸೇರಿದ್ದಾರೆ. ಇನ್ನೊಂದು ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಸರಕಾರವು ತಿಳಿಸಿದೆ.
ಈ ನಡುವೆ ಬಸ್ಸಿನ ಚಾಲಕರಾದ ಮಿರ್ಯಾಲ ಲಕ್ಷ್ಮಯ್ಯ ಮತ್ತು ಗುಡಿಪಾಟಿ ಶಿವನಾರಾಯಣ ಅವರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಾಲಕರು ಬೆಂಕಿ ಹತ್ತಿಕೊಂಡ ತಕ್ಷಣ ಪ್ರಯಾಣಿಕರನ್ನು ಎಚ್ಚರಿಸಿರಲಿಲ್ಲ ಎಂದು ಬದುಕುಳಿದವರು ದೂರಿದ್ದಾರೆ.
ಬಸ್ ದುರಂತದ ತನಿಖೆಗಾಗಿ ಆಂಧ್ರಪ್ರದೇಶ ಸರಕಾರವು ಸಮಿತಿಯೊಂದನ್ನು ರಚಿಸಿದೆ.