ನರೇಗಾ ಮರುನಾಮಕರಣ, ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲು ಕೇಂದ್ರದ ಯೋಜನೆ; ವರದಿ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು(ನರೇಗಾ) ಪರಿಷ್ಕರಿಸುವ ಮತ್ತು ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು indianexpress.com ವರದಿ ಮಾಡಿದೆ.
ವರದಿಯ ಪ್ರಕಾರ ನರೇಗಾಕ್ಕೆ ‘ಪೂಜ್ಯ ಬಾಪು ರೋಜಗಾರ್ ಯೋಜನಾ’ ಎಂದು ಮರುನಾಮಕರಣ ಮಾಡಲಾಗುವುದು. ಶುಕ್ರವಾರ ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವವನ್ನು ಚರ್ಚಿಸಲಾಗಿದೆ.
ಗ್ರಾಮೀಣ ಕುಟುಂಬಗಳ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನರೇಗಾ ಯೋಜನೆಯನ್ನು 2005ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೊಳಿಸಿತ್ತು. ಯೋಜನೆಯು ದೇಶದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ವಾರ್ಷಿಕ 100 ದಿನಗಳ ಕೌಶಲ್ಯರಹಿತ ಕೆಲಸವನ್ನು ಖಚಿತಪಡಿಸಿದೆ. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಸರಕಾರಗಳು ಭರಿಸುತ್ತವೆ.
ನರೇಗಾ ಯೋಜನೆಯನ್ನು ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಮಸೂದೆ ’ಎಂದು ಬದಲಿಸುವ ಕರಡು ಶಾಸನವನ್ನು ಸಂಪುಟವು ಅನುಮೋದಿಸಿದೆ ಮತ್ತು ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶುಕ್ರವಾರ ಸಚಿವ ಸಂಪುಟದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಒದಗಿಸಿದ್ದ ಅನುಮೋದಿತ ಪ್ರಸ್ತಾವಗಳ ಪಟ್ಟಿಯಲ್ಲಿ ಈ ಮಸೂದೆ ಸೇರಿರಲಿಲ್ಲ.
ಯೋಜನೆಯಡಿ ಗರಿಷ್ಠ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ಹಲವಾರು ರಾಜ್ಯಗಳು ಆಗ್ರಹಿಸಿವೆ.
ನರೇಗಾದಡಿ ದಿನದ ವೇತನವನ್ನು ಕನಿಷ್ಠ 400 ರೂ.ಗಳಿಗೆ ಮತ್ತು ಖಾತರಿ ಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು ಕನಿಷ್ಠ 150ಕ್ಕೆ ಹೆಚ್ಚಿಸುವಂತೆ ಕಳೆದ ಎಪ್ರಿಲ್‌ನಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರಕಾರವನ್ನು ಒತ್ತಾಯಿಸಿತ್ತು.
ಪ್ರಸ್ತುತ ನರೇಗಾದಡಿ ದಿನಗೂಲಿಯು ವಿವಿಧ ರಾಜ್ಯಗಳಲ್ಲಿ 241 ರೂ.ಗಳಿಂದ 400 ರೂ.ವರೆಗಿದೆ.
ಕಾನೂನು 100 ದಿನಗಳ ಕೆಲಸವನ್ನು ಖಚಿತಪಡಿಸಿದೆಯಾದರೂ 2024-25ರ ವಿತ್ತವರ್ಷದಲ್ಲಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒದಗಿಸಲಾದ ಸರಾಸರಿ ಕೆಲಸದ ದಿನಗಳು 50 ಮಾತ್ರ ಆಗಿದ್ದವು.
ಪ್ರತಿಪಕ್ಷಗಳ ಟೀಕೆ
ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆ ಕಾಂಗ್ರೆಸ್‌ನ ‘ವೈಫಲ್ಯಗಳ ಕಂತೆ ’ಎಂದು ಕರೆದಿದ್ದ ನರೇಗಾ ಯೋಜನೆ ಗ್ರಾಮೀಣ ಭಾರತದ ಜೀವನಾಡಿಯಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಅವರು,ಮೋದಿಯವರಿಗೆ ಕಾಂಗ್ರೆಸ್ ಯೋಜನೆಗಳ ಹೆಸರುಗಳನ್ನು ಬದಲಾಯಿಸುವ ಮತ್ತು ಅವುಗಳನ್ನು ತಮ್ಮದೇ ಎಂದು ಹೇಳಿಕೊಳ್ಳುವ ಹಾಗೂ ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಹಳೆಯ ಅಭ್ಯಾಸವಿದೆ. ಕಳೆದ 11 ವರ್ಷಗಳಿಂದಲೂ ಅದನ್ನೇ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನರೇಗಾದಿಂದ ‘ಮಹಾತ್ಮಾ’ಪದವನ್ನು ಅಳಿಸಿಹಾಕುವ ಸರಕಾರದ ನಿರ್ಧಾರವು ಕೇವಲ ಆಡಳಿತಾತ್ಮಕ ಪರಿಷ್ಕರಣೆಯಲ್ಲ,ಅದು ‘ಸೈದ್ಧಾಂತಿಕವಾಗಿ ಪ್ರೇರಿತ ಕೃತ್ಯ’ವಾಗಿದೆ ಎಂದು ಕಿಡಿಕಾರಿರುವ ತೃಣಮೂಲ ಕಾಂಗ್ರೆಸ್,ಈ ನಿರ್ಧಾರವು ಬಂಗಾಳದ ಸಂಸ್ಕೃತಿ ಮತ್ತು ಬೌದ್ಧಿಕ ಪರಂಪರೆಯತ್ತ ಬಿಜೆಪಿಯ ದೀರ್ಘಕಾಲೀನ ದ್ವೇಷವನ್ನು ಬಹಿಗರಂಗಗೊಳಿಸಿದೆ. ಗಾಂಧಿಯವರಿಗೆ ‘ಮಹಾತ್ಮಾ’ ಬಿರುದನ್ನು ರವೀಂದ್ರನಾಥ ಟಾಗೋರ್ ಅವರು ಜನಪ್ರಿಯಗೊಳಿಸಿದ್ದರು,ತನ್ಮೂಲಕ ಅದನ್ನು ಭಾರತದ ನೈತಿಕ ಶಬ್ದಕೋಶದ ಭಾಗವಾಗಿಸಿದ್ದರು. ಅದನ್ನು ಅಳಿಸುವುದು ಭಾರತವು ಸ್ವಾತಂತ್ರ್ಯವನ್ನು ಸ್ಮರಿಸುವ ರೀತಿಯನ್ನು ಮರುರೂಪಿಸುತ್ತದೆ ಎಂದಿದೆ.