×
Ad

ಬಿಹಾರ ಚುನಾವಣೆ: ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಗೊಂದಲದ ನಡುವೆಯೇ RJD ಟಿಕೆಟ್ ವಿತರಿಸಿದ ಲಾಲು ಪ್ರಸಾದ್ !

Update: 2025-10-14 19:16 IST

ಲಾಲು ಪ್ರಸಾದ್ |Photo Credit : PTI 

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಯ ಗಡುವು ಸಮೀಪಿಸುತ್ತಿರುವಂತೆಯೇ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನ್‌ ನಲ್ಲಿ ಸೀಟು ಹಂಚಿಕೆ ಒಪ್ಪಂದದ ಕುರಿತ ಚರ್ಚೆ ಇನ್ನೂ ಅಂತಿಮ ಹಂತ ತಲುಪಿಲ್ಲ. ಈ ರಾಜಕೀಯ ಅನಿಶ್ಚಿತತೆಯ ನಡುವೆಯೇ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಪಕ್ಷದ ಕೆಲವು ಪ್ರಮುಖ ನಾಯಕರಿಗೆ ಟಿಕೆಟ್ ವಿತರಿಸಿದ್ದಾರೆ ಎಂದು ವರದಿಯಾಗಿದೆ.

ದಿಲ್ಲಿ ನ್ಯಾಯಾಲಯದ ವಿಚಾರಣೆಯಿಂದ ಪಾಟ್ನಾಗೆ ಮರಳಿದ ಲಾಲು ಅವರ ನಿವಾಸದ ಹೊರಗೆ ಬೆಳಗ್ಗಿನಿಂದಲೇ ಪಕ್ಷದ ಆಕಾಂಕ್ಷಿಗಳ ಮತ್ತು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿರುವುದು ಕಂಡುಬಂತು.

ಪಕ್ಷದಿಂದ ಕರೆ ಬಂದ ಅಭ್ಯರ್ಥಿಗಳು ಒಬ್ಬರ ಹಿಂದೆ ಒಬ್ಬರು ಅವರ ನಿವಾಸಕ್ಕೆ ಆಗಮಿಸಿ, ಕೆಲವು ನಿಮಿಷಗಳ ಬಳಿಕ ಆರ್‌ಜೆಡಿ ಚಿಹ್ನೆ ಕೈಯಲ್ಲಿ ಹಿಡಿದು ನಗುಮುಖದಿಂದ ಹೊರಬಂದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಿಕೆಟ್ ಪಡೆದವರಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ತೊರೆದ ಸುನಿಲ್ ಸಿಂಗ್ (ಪರ್ಬಟ್ಟಾ) ಹಾಗೂ ಮಟಿಹಾನಿ ಕ್ಷೇತ್ರದಿಂದ ಜೆಡಿ(ಯು) ವಿರುದ್ಧ ಎರಡು ಬಾರಿ ಗೆಲುವು ಸಾಧಿಸಿದ್ದ ನರೇಂದ್ರ ಕುಮಾರ್ ಸಿಂಗ್ ಅಲಿಯಾಸ್ ಬೊಗೊ ಪ್ರಮುಖರು. ಈ ಇಬ್ಬರ ಆಯ್ಕೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಚುನಾವಣಾ ತಂತ್ರದ ಭಾಗವಾಗಿ ಸಾಂಪ್ರದಾಯಿಕವಾಗಿ ಬಿಜೆಪಿ ಪರ ನಿಂತಿರುವ ಮೇಲ್ಜಾತಿಯ ಭೂಮಿಹಾರ್ ಮತದಾರರನ್ನು ಸೆಳೆಯುವ ಪ್ರಯತ್ನವಾಗಿ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೈತ್ರಿ ಪಕ್ಷಗಳ ಅಸಮಾಧಾನದ ಹಿನ್ನೆಲೆಯಲ್ಲಿ ಕೆಲವು ಟಿಕೆಟ್‌ಗಳನ್ನು ವಾಪಸ್ ಹಿಂತೆಗೆದುಕೊಳ್ಳಲಾಗಿದೆ ಎನ್ನುವ ವರದಿಯೂ ಇದೆ.

ಲಾಲು ಪ್ರಸಾದ್ ಯಾದವ್ ಮೈತ್ರಿ ಪಾಲುದಾರರ ಅನುಮತಿಯಿಲ್ಲದೆ ಟಿಕೆಟ್ ವಿತರಿಸುವುದು ಹೊಸದೇನಲ್ಲ. 2024ರ ಲೋಕಸಭಾ ಚುನಾವಣೆಗೆ ಮುನ್ನವೂ ಅವರು ಇದೇ ರೀತಿಯ ಕ್ರಮ ಕೈಗೊಂಡಿದ್ದರು. ಬಳಿಕ ಮೈತ್ರಿ ಪಕ್ಷಗಳು ಒತ್ತಡಕ್ಕೆ ತಲೆಬಾಗಬೇಕಾಯಿತು.

ಈ ನಡುವೆ, ಲಾಲು ಅವರ ಪುತ್ರ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಕುರಿತ ಚರ್ಚೆ ನಡೆಸಿದರು. ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಉಪಸ್ಥಿತರಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಮೂಲಗಳ ಪ್ರಕಾರ, ತೇಜಸ್ವಿ ಯಾದವ್ ಇದೇ ವಿಷಯವಾಗಿ ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಸಿಎಲ್‌ಪಿ ನಾಯಕ ಶಕೀಲ್ ಅಹ್ಮದ್ ಖಾನ್ ಅವರೊಂದಿಗೆ ಮುಂಚಿತವಾಗಿ ಮಾತುಕತೆ ನಡೆಸಿದ್ದರು.

ಮಹಾಘಟಬಂಧನ್ ಮುಂದಿನ ಕೆಲ ದಿನಗಳಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ಘೋಷಣೆ ಮಾಡುವ ನಿರೀಕ್ಷೆಯಿದ್ದು, ಈ ವಾರದೊಳಗೆ ಜಂಟಿ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

2020ರ ಚುನಾವಣೆಯಲ್ಲಿ ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19 ಸ್ಥಾನಗಳಷ್ಟೇ ಗೆದ್ದಿದ್ದರಿಂದ, ಈ ಬಾರಿ ಪಕ್ಷಕ್ಕೆ ಕಡಿಮೆ ಸ್ಥಾನಗಳು ಸಿಗುವ ಸಾಧ್ಯತೆ ಇದೆ. ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಿ 75 ಸ್ಥಾನಗಳನ್ನು ಗೆದ್ದಿತ್ತು.

ಮತ್ತೊಂದೆಡೆ, ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಘೋಷಿಸಿದ ಪ್ರಕಾರ, ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಕಾಸ್) 29 ಸ್ಥಾನಗಳಲ್ಲಿ, ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆ ಅಕ್ಟೋಬರ್ 10ರಿಂದ ಪ್ರಾರಂಭವಾಗಿದ್ದು, 121 ಸ್ಥಾನಗಳಿಗೆ ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News