ಲಿಫ್ಟ್ ದೋಷದಿಂದ ಬಾಲಕ ಸಾವು ಪ್ರಕರಣ: ಹೌಸಿಂಗ್ ಸೊಸೈಟಿ ಪದಾಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (Photo : taxreply.com)
ಮುಂಬೈ: ಮುಂಬೈಯ ಹೌಸಿಂಗ್ ಸೊಸೈಟಿಯೊಂದರಲ್ಲಿ ಜೂನ್ 7ರಂದು ಲಿಫ್ಟ್ ದೋಷದಿಂದಾಗಿ 10 ವರ್ಷದ ಬಾಲಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಲ್ಲಿನ ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ, ಕೋಶಾಧಿಕಾರಿ, ಓರ್ವ ಸದಸ್ಯ, ಲಿಫ್ಟ್ ಗುತ್ತಿಗೆದಾರ ಹಾಗೂ ಟೆಕ್ನಿಷಿಯನ್ ಒಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಲಲ್ಲುಭಾಯಿ ಕಂಪೌಂಡಿನಲ್ಲಿರುವ ಸುಪ್ರಭಾತ್ ಹೌಸಿಂಗ್ ಸೊಸೈಟಿಯ ಐದನೇ ಅಂತಸ್ತಿನಲ್ಲಿ ಬಾಲಕ ರುದ್ರ ವಾಸಿಸುತ್ತಿದ್ದ. ಆತನ ತಾಯಿ ಪ್ರಿಯಾಂಕ ಬರ್ಹತೆ ತಮ್ಮ ದೂರಿನಲ್ಲಿ ತಿಳಿಸಿದಂತೆ ಈ ಹೌಸಿಂಗ್ ಸೊಸೈಟಿಯಲ್ಲಿ ದೂರು ರಿಜಿಸ್ಟರ್ ಇಲ್ಲವಾಗಿತ್ತು ಹಾಗೂ ಲಿಫ್ಟ್ ದೋಷದ ಕುರಿತು ನಿವಾಸಿಗಳು ಕೆಲ ಸಮಯದಿಂದ ಸೊಸೈಟಿಯ ವಾಟ್ಸ್ಯಾಪ್ ಗ್ರೂಪಿನಲ್ಲಿ ದೂರಿದ್ದರು.
ಜೂನ್ 6ರಂದು ಲಿಫ್ಟ್ ದುರಸ್ತಿಗೊಳ್ಳುತ್ತಿರುವುದು ತಮ್ಮ ಮೈದುನ ಗಮನಿಸಿದ್ದಾಗಿ ಹಾಗೂ ಲಿಫ್ಟ್ ಸಂಪೂರ್ಣ ದುರಸ್ತಿಗೊಳ್ಳುವ ತನಕ ಅದನ್ನು ಮುಚ್ಚಬೇಕೆಂದು ಟೆಕ್ನಿಷಿಯನ್ ಅಲ್ಲಿ ಹಾಜರಿದ್ದ ಸೊಸೈಟಿಯ ಕೋಶಾಧಿಕಾರಿಗೆ ಹೇಳಿದ್ದನ್ನು ಕೇಳಿಸಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮರುದಿನ ಮಗನನ್ನು ಅಂಗಡಿಗೆ ಸಾಮಾನು ಖರೀದಿಸಲು ಕಳುಹಿಸಿದ್ದ ನಂತರ ಈ ದುರಂತ ಸಂಭವಿಸಿದೆ ಐದನೇ ಅಂತಸ್ತಿನಲ್ಲಿ ನಿಲ್ಲುವ ಬದಲು ಲಿಫ್ಟ್ ಏಳನೇ ಅಂತಸ್ತಿಗಿಂತ ಮೇಲೆ ವೇಗವಾಗಿ ಅದಕ್ಕಿಂತಲೂ ಸ್ವಲ್ಪ ಮೇಲೆ ನಿಂತಿದ್ದರಿಂದ ಆಗ ಹೊರಬರಲು ಪ್ರಯತ್ನಿಸುವ ವೇಳೆ ಸಿಲುಕಿಕೊಂಡು ಸಾವನ್ನಪ್ಪಿರಬೇಕೆಂದು ದೂರುದಾರೆ ಶಂಕಿಸಿದ್ದಾರೆ. ಸೊಸೈಟಿಯ ನಿರ್ಲಕ್ಷ್ಯ ತಮ್ಮ ಮಗನ ಸಾವಿಗೆ ಕಾರಣ ಎಂದು ಅವರು ದೂರಿದ್ದರು.