"ಪರಿಹಾರಕ್ಕೆ ಯಾವುದೇ ಮಾರ್ಗಸೂಚಿಯಿಲ್ಲ": ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣ ಕುರಿತು ಸ್ಥಳೀಯರ ಅಸಮಾಧಾನ
"ಪ್ರತ್ಯೇಕ ಆಡಳಿತದ ಬಗ್ಗೆ ಪ್ರಧಾನಿಯವರಿಗೆ ಏನನ್ನೂ ಕೇಳಬಾರದು ಎಂದು ತಿಳಿಸಲಾಗಿತ್ತು"
ಪ್ರಧಾನಿ ನರೇಂದ್ರ ಮೋದಿ (PTI)
ಇಂಫಾಲ: ಮೈತೈ ಮತ್ತು ಕುಕಿ-ಝೊ ಬುಡಕಟ್ಟು ಜನಾಂಗದ ನಡುವೆ 2023,ಮೇ 3ರಂದು ಜನಾಂಗೀಯ ಸಂಘರ್ಷ ಭುಗಿಲೆದ್ದ ಬಳಿಕ ಮಣಿಪುರಕ್ಕೆ ತನ್ನ ಮೊದಲ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂಫಾಲ ಮತ್ತು ಚುರಾಚಂದಪುರದಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ಮುನ್ನ ಕೆಲವು ಆಂತರಿಕವಾಗಿ ಸ್ಥಳಾಂತರಿತ ವ್ಯಕ್ತಿಗಳೊಂದಿಗೆ (ಐಡಿಪಿಗಳು) ಸಂವಾದವನ್ನು ನಡೆಸಿದ್ದರು.
ಐಡಿಪಿಗಳು ಏನು ಹೇಳಿದರು ಎನ್ನುವುದು ತಿಳಿದಿಲ್ಲವಾದರೂ ಮೋದಿ ಅವರ ಮಾತುಗಳನ್ನು ಗಮನವಿಟ್ಟು ಆಲಿಸಿದ್ದರು.
ಏನನ್ನು ಮಾತನಾಡಬೇಕು ಎಂದು ಐಡಿಪಿಗಳಿಗೆ ಮೊದಲೇ ಸೂಚಿಸಲಾಗಿತ್ತು ಎಂದು ಹೇಳಲಾಗಿದ್ದು, ಹೀಗಾಗಿ ಅವರಿಗೆ ಕೇಂದ್ರಾಡಳಿತ ಪ್ರದೇಶ ರಚನೆಯ ಮೂಲಕ ಪ್ರತ್ಯೇಕ ಆಡಳಿತದ ಬೇಡಿಕೆಯನ್ನು ಎತ್ತಲು ಸಾಧ್ಯವಾಗಲಿಲ್ಲ ಎಂದು ಚುರಾಚಂದ್ರಪುರದ ಕೆಲವು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಪ್ರತ್ಯೇಕ ಆಡಳಿತದ ಬಗ್ಗೆ ಪ್ರಧಾನಿಯವರಿಗೆ ಏನನ್ನೂ ಕೇಳಬಾರದು ಎಂದು ಅವರಿಗೆ ತಿಳಿಸಲಾಗಿತ್ತು. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಇತ್ಯಾದಿಗಳಂತಹ ವಿಷಯಗಳ ಬಗ್ಗೆ ಮಾತ್ರ ಮಾತನಾಡಲು ಅವರಿಗೆ ಅನುಮತಿ ನೀಡಲಾಗಿತ್ತು ಎಂದು ಸ್ಥಳೀಯ ನಿವಾಸಿಯೋರ್ವರು ತಿಳಿಸಿದರು.
ಮೋದಿಯವರು ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ಸ್ಥಳೀಯರ ಒಂದು ವರ್ಗವು ಅಸಮಾಧಾನ ವ್ಯಕ್ತಪಡಿಸಿದೆ.
ಮಿಜೋರಮ್‌ನಲ್ಲಿ ಅವರು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದರು, ಆದರೆ ಚುರಾಚಂದಪುರದಲ್ಲಿ ಹಿಂದಿಯಲ್ಲಿ ಮಾತನಾಡಿದರು. ಜನರು ಸಂತುಷ್ಟರಾಗಿಲ್ಲ. ಅವರು ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಅಭಿವೃದ್ಧಿ ಪ್ಯಾಕೇಜ್ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ಹೇಳಿದ ಇನ್ನೋರ್ವ ಸ್ಥಳೀಯ ನಿವಾಸಿ, ಇದು ಓರ್ವ ವ್ಯಕ್ತಿಯ ಭಾವನೆಯಲ್ಲ, ಸಾರ್ವಜನಿಕ ಭಾವನೆಯಾಗಿದೆ ಎಂದು ಹೇಳಿದರು.
‘ಸಂಘರ್ಷವನ್ನು ಬಗೆಹರಿಸುವ ಬಗ್ಗೆ ಯಾವುದೇ ಯೋಜನೆಗಳ ಕುರಿತು ಪ್ರಧಾನಿ ಮಾತನಾಡಲಿಲ್ಲ. ಸರಕಾರವು ಯೋಜನೆಗಳನ್ನು ಹೊಂದಿದ್ದರೆ ಅವರು ಅದರ ಬಗ್ಗೆ ಏನಾದರೂ ಮಾತನಾಡಬಹುದು ಎಂದು ನಾವೆಲ್ಲ ಆಶಿಸಿದ್ದೆವು. ಅಲ್ಲದೆ,ಅವರ ಭಾಷಣವೂ ಸಂಕ್ಷಿಪ್ತವಾಗಿತ್ತು. ಆದರೆ ಪ್ರತಿಕೂಲ ಹವಾಮಾನವಿದ್ದರೂ ಅವರು ಇಲ್ಲಿಗೆ ಭೇಟಿ ನೀಡಿದ್ದು ನಮಗೆ ಸಂತೋಷವನ್ನುಂಟು ಮಾಡಿದೆ ’ ಎಂದು ಸ್ಥಳೀಯ ನಿವಾಸಿ ಮುಂಗ್ ಹಂಘಲ್ ಹೇಳಿದರು.
ಇಂಫಾಲದಲ್ಲಿ ಮೋದಿಯವರು ಐಡಿಪಿಗಳನ್ನು ಭೇಟಿಯಾದಾಗ ಅವರಲ್ಲಿ ಕೆಲವರು ಕಣ್ಣೀರು ಹಾಕಿದರು ಎನ್ನಲಾಗಿದೆ. ಪ್ರಧಾನಿಯವರ ಮಾತುಗಳನ್ನು ಕೇಳಿದ ಬಳಿಕ ಸ್ಥಳೀಯರು ಸಂತುಷ್ಟರಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸಿತ್ತು.
ಚುರಾಚಂದ್ರಪುರದಂತೆ ಇಂಫಾಲದಲ್ಲಿಯೂ ಜನರು ಮೋದಿ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾರೆಂದು ನಿರೀಕ್ಷಿಸಿದ್ದರು.
‘ಪ್ರಧಾನಿ ಭಾಷಣ ಚೆನ್ನಾಗಿತ್ತು,ಆದರೆ ನನ್ನಲ್ಲಿ ಭರವಸೆ ಮೂಡಲಿಲ್ಲ. ಪರಿಹಾರದ ಮಾರ್ಗ ನಮಗೆ ತಿಳಿದಿಲ್ಲ ’ ಎಂದು ಸೂರಜಕುಮಾರ ಸಿಂಗ್ ಹೇಳಿದರು.
‘ಪ್ರಧಾನಿ ಭೇಟಿಯು ಕೆಲವು ಅಭಿವೃದ್ಧಿ ಘೋಷಣೆಗಳನ್ನು ತಂದಿದೆ, ಆದರೆ ಈಗಲೂ ಪರಿಹಾರ ಶಿಬಿರಗಳಲ್ಲಿ ಕೊಳೆಯುತ್ತಿರುವ ಸ್ಥಳಾಂತರಿತ ಮೈತೈ ಕುಟುಂಬಗಳಿಗೆ ಅದು ಕಿಂಚಿತ್ತೂ ಉಪಯೋಗವಿಲ್ಲ. ನಾವು ಪುನರ್‌ವಸತಿಯ ಬಗ್ಗೆ ಸ್ಪಷ್ಟತೆಯನ್ನು ನಿರೀಕ್ಷಿಸಿದ್ದೆವು. ಜನರಿಗೆ ತಮ್ಮ ಮನೆಗಳಿಗೆ ಮರಳಲು ಯಾವಾಗ ಸಾಧ್ಯವಾಗಲಿದೆ,ಅವರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳಲಾಗುತ್ತದೆ ಮತ್ತು ಯಾವ ಪುನರ್ವಸತಿ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ನಿರೀಕ್ಷಿಸಿದ್ದೆವು ’ ಎಂದು ಇಂಫಾಲ ನಿವಾಸಿ ಲೀಶಾಂಗ್ದೆಮ್ ಪ್ರಿಯೊ ಹೇಳಿದರು.